ರಾಜ್ಯ

ಅತ್ತ ರೈತರಿಂದ ಭಾರತ ಬಂದ್; ಇತ್ತ ಕಾಂಗ್ರೆಸ್ ನಾಯಕರಿಂದ ಪ್ರತಿಭಟನೆ; ಬಿಜೆಪಿ ನಾಯಕರಿಂದ ಕಾಯ್ದೆ ಬೆಂಬಲಿಸಿ ಟ್ವೀಟ್ 

Sumana Upadhyaya

ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಮಸೂದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ ರೈತರ ದೆಹಲಿ ಚಲೋ ಮಂಗಳವಾರ 13ನೇ ದಿನಕ್ಕೆ ಕಾಲಿಟ್ಟು ಇಂದು ಬೆಳಗ್ಗೆ 11 ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ಬಂದ್ ನಡೆಯಲಿದೆ.

ಇನ್ನು ನಾಳೆ ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆಗಳ ಮಧ್ಯೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದ್ದು ಅದು ಕೂಡ ವಿಫಲವಾದರೆ ಮುಂದೆ ಮಾತುಕತೆಗೆ ಹೋಗದಿರಲು ಕಠಿಣ ನಿರ್ಧಾರ ತೆಗೆದುಕೊಳ್ಳಲು ಸಂಘಟನೆಗಳು ನಿರ್ಧರಿಸಿವೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ ಇತ್ತ ಬಿಜೆಪಿ ನಾಯಕರು ಕಾಯ್ದೆ ಬೆಂಬಲಿಸಿ ಟ್ವೀಟ್ ಮಾಡುತ್ತಿದ್ದಾರೆ, ಕಾಯ್ದೆಯನ್ನು ರೈತರು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಿಲ್ಲ, ಯಾರದ್ದೋ ಆಮಿಷ, ಆಸೆ, ಬೆದರಿಕೆಗಳಿಗೆ ಬಲಿಯಾಗಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಕ್ಷಣಿಕ ಸುಖಕ್ಕಾಗಿ ನಿಮ್ಮ ಭವಿಷ್ಯದ ಸುಖ, ಸಂತೋಷವನ್ನು ಬಲಿಕೊಡಬೇಡಿ ಎಂದು ರೈತರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.

ನೂತನ ಕೃಷಿ ಕಾಯ್ದೆ ಮೂಲಕ, ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಯಾರಿಗೆ ಬೇಕಾದರೂ ಮಾರಾಟ ಮಾಡಬಹುದಾಗಿದೆ. ಎಪಿಎಂಸಿಯ ಏಕಸ್ವಾಮ್ಯ ಕೊನೆಯಾಗುತ್ತದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ಉತ್ಪನ್ನ ಮಾರಾಟ ಮಾಡಿದ ಮೂರು ದಿನಗಳಲ್ಲಿ ಹಣ ಸಂದಾಯವಾಗುತ್ತದೆ. ಸದ್ಯ ಎಪಿಎಂಸಿಯನ್ನು ಮಧ್ಯವರ್ತಿಗಳು ಆಳುತ್ತಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಎಸ್ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ(ಉತ್ತೇಜನ ಮತ್ತು ಸೌಲಭ್ಯ) ವಿಧೇಯಕ 2020 ಬಗ್ಗೆ ಸತ್ಯವನ್ನು ತಿಳಿಯೋಣ ಎಂದು ಸಂಸದ ಪ್ರತಾಪ್ ಸಿಂಹ ವಿವರಿಸುವ ಪ್ರಯತ್ನ ಮಾಡಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಂಸದೆ ಶೋಭಾ ಕರಂದ್ಲಾಜೆ ಕೂಡ ಇದೇ ರೀತಿ ಟ್ವೀಟ್ ಮಾಡಿದ್ದಾರೆ. 

ಬಿಜೆಪಿ ವಕ್ತಾರ ಅಮಿತ್ ಮಾಳವೀಯ, ಕೃಷಿಕರಿಗೆ ಆಧುನಿಕ ತಂತ್ರಜ್ಞಾನಕ್ಕೆ ಪ್ರವೇಶವನ್ನು ನೀಡುವಾಗ ಕೃಷಿ-ವ್ಯಾಪಾರ ಕಂಪನಿಗಳು, ಚಿಲ್ಲರೆ ವ್ಯಾಪಾರಿಗಳು, ಸೇವೆ ಮತ್ತು ಉತ್ಪನ್ನಗಳ ಮಾರಾಟಕ್ಕಾಗಿ ರಫ್ತುದಾರರೊಂದಿಗೆ ತಮ್ಮ ಇಚ್ಚೆಯಂತೆ ತೊಡಗಿಸಿಕೊಳ್ಳಲು ಈ ಕಾಯಿದೆಗಳು ಉದ್ದೇಶಿಸಿವೆ.ಸಣ್ಣ ಮತ್ತು ಮಧ್ಯಮ ಗಾತ್ರದ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ರಾಜ್ಯ ಬಿಜೆಪಿ ನಿನ್ನೆ ಪ್ರಧಾನಿಯವರು ಕೃಷಿ ಕಾಯ್ದೆ ಬಗ್ಗೆ ಮಾಡಿರುವ ಭಾಷಣದ ವಿಡಿಯೊ ತುಣುಕು ಹಾಕಿ ನೂತನ ಕಾಯ್ದೆ ರೈತರಿಗೆ ಹೊಸ ಅವಕಾಶಗಳನ್ನು ನೀಡುತ್ತದೆ ಎಂದಿದ್ದಾರೆ.

ಆದರೆ ಕಾಂಗ್ರೆಸ್ ಕೃಷಿ ಮಸೂದೆಯನ್ನು ವಿರೋಧಿಸಿದ್ದು, ರಾಜ್ಯ ಕಾಂಗ್ರೆಸ್ ನಾಯಕರು ವಿಧಾನಸೌಧ ಮುಂದೆ ಇಂದು ಪ್ರತಿಭಟನೆ ನಡೆಸಿದರು. ರೈತರಿಗೆ ಮಾರಕವಾದ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಶಾಸಕರು, ಮುಖಂಡರು ಇಂದು ವಿಧಾನಸೌಧ ಆವರಣದಲ್ಲಿನ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದರು. 

SCROLL FOR NEXT