ರಾಜ್ಯ

ರೈತರ ತೀವ್ರ ವಿರೋಧದ ನಡುವೆಯೂ ವಿಧಾನ ಪರಿಷತ್ ನಲ್ಲಿ ಭೂ ಸುಧಾರಣೆ ತಿದ್ದುಪಡಿ ಮಸೂದೆ ಅಂಗೀಕಾರ

Lingaraj Badiger

ಬೆಂಗಳೂರು: ರೈತ ಸಂಘಟನೆಗಳ ಪ್ರತಿಭಟನೆ ಹಾಗೂ ಕಾಂಗ್ರೆಸ್ ನ ತೀವ್ರ ವಿರೋಧದ ನಡುವೆಯೇ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಮಸೂದೆಯನ್ನು ಮಂಗಳವಾರ ವಿಧಾನ ಪರಿಷತ್ ನಲ್ಲಿ ಅಂಗೀಕರಿಸಲಾಯಿತು.

ಹಿಂದಿನ ಅಧಿವೇಶನದಲ್ಲಿ ಭೂ ಸುಧಾರಣಾ ತಿದ್ದುಪಡಿ ಮಸೂದೆಗೆ ವಿಧಾನ ಪರಿಷತ್ ಒಪ್ಪಿಗೆ ದೊರಕಿರಲಿಲ್ಲ. ಹೀಗಾಗಿ ಸೋಮವಾರ ಆರಂಭವಾದ ಅಧಿವೇಶನದಲ್ಲಿ ಕಂದಾಯ ಸಚಿವ ಆರ್. ಅಶೋಕ ಅವರು ಮತ್ತೆ ಪರಿಷ್ಕೃತ ಮಸೂದೆ ಮಂಡಿಸಿದ್ದರು.

ಮಸೂದೆಯ ಕುರಿತು ವಿಸ್ತೃತ ಚರ್ಚೆ ಆಗಬೇಕೆಂದು ಕಾಂಗ್ರೆಸ್‌ ಮತ್ತು ಜೆಡಿಎಸ್ ಸದಸ್ಯರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಚರ್ಚೆಯ ನಂತರ ಇಂದು ಮಸೂದೆಯನ್ನು ಮತಕ್ಕೆ ಹಾಕಲಾಯಿತು. ವಿಧೇಯಕದ ಪರವಾಗಿ 31 ಮತ ಹಾಗೂ ವಿರುದ್ಧವಾಗಿ 21 ಮತಗಳು ಚಲಾವಣೆಯಾಗಿದ್ದು, ಜೆಡಿಎಸ್ ಬೆಂಬಲದೊಂದಿಗೆ ಮಸೂದೆ ಅಂಗೀಕರಿಸಲಾಗಿದೆ. ಇದರೊಂದಿಗೆ ಭೂಮಿ ಮಾರಲು ಹಾಗೂ ಖರೀದಿಸಲು ಇದ್ದ ದೊಡ್ಡ ಬೇಲಿಯೊಂದನ್ನು ಕಿತ್ತುಹಾಕಿದಂತಾಗಿದ್ದು, ಇನ್ನುಮುಂದೆ ಯಾರೂ ಬೇಕಾದರೂ ಕೃಷಿ ಭೂಮಿ ಖರೀದಿಸಬಹುದಾಗಿದೆ.

ಜೆಡಿಎಸ್ ವಿಧೇಯಕದ ಪರವಾಗಿ ಮತ ಚಲಾಯಿಸಿದ್ದಕ್ಕೆ ಬಿಜೆಪಿ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು.

ಈ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದ ಕಾಂಗ್ರೆಸ್, ‘ನಾವೆಲ್ಲ ರೈತರು ಬೆಳೆದ ಅನ್ನ ತಿನ್ನುವವರು. ನೀವೂ ಅದನ್ನೇ ತಿನ್ನುತ್ತೀರಿ ಎಂದು ಭಾವಿಸಿರುವೆ’ ಎಂದು ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದರು. ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ನಡೆಯಿತು.

SCROLL FOR NEXT