ರಾಜ್ಯ

ಆರ್ ಒ ಕುಡಿಯುವ ನೀರು ಘಟಕ ಹಗರಣ: ತನಿಖೆಗೆ ಸಿಎಂ ಯಡಿಯೂರಪ್ಪ ಆದೇಶ 

Sumana Upadhyaya

ಬೆಂಗಳೂರು: ಆರ್ ಒ ಕುಡಿಯುವ ನೀರು ಶುದ್ಧೀಕರಣ ಘಟಕದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಬಹುದೊಡ್ಡ ಹಗರಣದ ಬಗ್ಗೆ ತನಿಖೆಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆದೇಶ ನೀಡಿದ್ದಾರೆ.

ಆರ್ ಒ ಕುಡಿಯುವ ನೀರು ಶುದ್ಧೀಕರಣ ಘಟಕದ ಹಗರಣ ವಿವಾದಕ್ಕೆ ಸಂಬಂಧಿಸಿದಂತೆ ನಿನ್ನೆ ವಿಧಾನಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಸದಸ್ಯರು, ವಿರೋಧ ಪಕ್ಷಗಳ ಸದಸ್ಯರು ತೀವ್ರ ಗದ್ದಲ ಎಬ್ಬಿಸಿದ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ, ಜಂಟಿ ಆಯ್ಕೆ ಸಮಿತಿ ತನಿಖೆ ನಡೆಸಲಿದ್ದು ಮುಂದಿನ ಅಧಿವೇಶನದಲ್ಲಿ ಅದರ ವರದಿಯನ್ನು ಸದನದಲ್ಲಿ ಮಂಡಿಸಲಾಗುವುದು ಎಂದು ಪ್ರಕಟಿಸಿದರು.

ಇದೊಂದು ಬಹುದೊಡ್ಡ ಹಗರಣ ಎಂದು ತಮ್ಮ ಗಮನಕ್ಕೆ ಬಂದಿದೆ ಎಂದು ಕೂಡ ಸಿಎಂ ಯಡಿಯೂರಪ್ಪ ಹೇಳಿದರು. ಅನೇಕ ಆರ್‌ಒ ಸ್ಥಾವರಗಳಲ್ಲಿ, ಉಪಕರಣಗಳು ಮತ್ತು ವಸ್ತುಗಳು ಬಳಕೆಯಾಗದೆ ಉಳಿದಿವೆ. ಈ ಘಟಕಗಳಲ್ಲಿ ನಾಲ್ಕು ಪಟ್ಟು ಹಣವನ್ನು ಖರ್ಚು ಮಾಡಲಾಗಿದೆ ಎಂದು ಸಹ ತಿಳಿದುಬಂದಿದೆ. ಜಂಟಿ ಆಯ್ಕೆ ಸಮಿತಿಯಿಂದ ವಿವರವಾದ ತನಿಖೆ ನಡೆಸಲಾಗುವುದು. ರಾಜ್ಯಾದ್ಯಂತ ಪಯಣಿಸಿ ಎರಡು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಬೇಕಿದೆ ಎಂದು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.

ಈ ವಿಷಯ ಹಿಂದೆ ಕೂಡ ಪ್ರಸ್ತಾಪವಾಗಿತ್ತು. ರಾಜ್ಯ ಸರ್ಕಾರ ಆಗ ಇಪ್ಸೊಸ್ ರಿಸರ್ಚ್ ಪ್ರೈವೆಟ್ ಲಿಮೆಟೆಡ್ ಎಂಬ ಎನ್ ಜಿಒ ಮೂಲಕ ಸಮೀಕ್ಷೆಗೆ ಆದೇಶಿಸಿತ್ತು ಎಂದು ಹೇಳಿದ್ದಾರೆ. 18,500 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 70 ಪ್ರತಿಶತದಷ್ಟು ಕಾರ್ಯನಿರ್ವಹಿಸುತ್ತಿವೆ, 26 ಶೇಕಡಾ ತಾತ್ಕಾಲಿಕವಾಗಿ ಮುಚ್ಚಲಾಗಿದೆ ಮತ್ತು 4 ಪ್ರತಿಶತವನ್ನು ಶಾಶ್ವತವಾಗಿ ಮುಚ್ಚಲಾಗಿದೆ ಎಂದು ಸಮೀಕ್ಷೆಯು ತೋರಿಸಿದೆ. ತನಿಖೆ ನಡೆಸಲಾಗುವುದು ಎಂದು ಸಚಿವರು ಹೇಳಿದರು.

SCROLL FOR NEXT