ಲಕ್ಷ್ಮಣ್ ಸವದಿ 
ರಾಜ್ಯ

ಸಾರಿಗೆ ನೌಕರರೇ ‘ಬನ್ನಿ ಮುಕ್ತವಾಗಿ ಚರ್ಚಿಸೋಣ’: ಸಾರಿಗೆ ಸಚಿವ ಲಕ್ಷ್ಮಣ ಸವದಿ

ಕಳೆದ ಮೂರು ದಿನಗಳಿಂದ ಪ್ರತಿಭಟನಾ ನಿರತ ಸಾರಿಗೆ ಸಿಬ್ಬಂದಿಗೆ ಮುಕ್ತ ಮಾತುಕತೆಗೆ ಬರುವಂತೆ ಸಾರಿಗೆ ಸಚಿವ, ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಆಹ್ವಾನ ನೀಡಿದ್ದಾರೆ.

ಬೆಂಗಳೂರು: ಕಳೆದ ಮೂರು ದಿನಗಳಿಂದ ಪ್ರತಿಭಟನಾ ನಿರತ ಸಾರಿಗೆ ಸಿಬ್ಬಂದಿಗೆ ಮುಕ್ತ ಮಾತುಕತೆಗೆ ಬರುವಂತೆ ಸಾರಿಗೆ ಸಚಿವ, ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಆಹ್ವಾನ ನೀಡಿದ್ದಾರೆ.

ಏನೇ ಬೇಡಿಕೆ ಇದ್ದರೂ ಮುಕ್ತ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳೋಣ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಇಂದು ಮತ್ತು ನಿನ್ನೆ ನಾಡಿನ ಕೆಲವೆಡೆ ಸಾರಿಗೆ ಸಂಸ್ಥೆಗಳ ಬಸ್ಸು ಸಂಚಾರ ಸ್ಥಗಿತಗೊಂಡಿರುವುದು, ಮುಷ್ಕರ ನಡೆಯುವಂತಾಗಿರುವುದು ಮತ್ತು ಬಸ್ಸುಗಳಿಗೆ ಕಲ್ಲು ತೂರಾಟ ಹಾಗೂ ಹಾನಿಗೊಳಿಸುವಿಕೆಯಂತಹ ಅಹಿತಕರ ಘಟನೆ ನಡೆದಿರುವುದು ನಿಜಕ್ಕೂ ದುರ್ದೈವದ ಸಂಗತಿಯಾಗಿದೆ. ಈ ಬಗ್ಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. 

ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಸುಮಾರು 1.30 ಲಕ್ಷ ನೌಕರರ ಹಿತಾಸಕ್ತಿ ರಕ್ಷಿಸಲು ನಮ್ಮ ಸರ್ಕಾರ ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಸಾರಿಗೆ ಸಿಬ್ಬಂದಿಗಳ ಬಗ್ಗೆ ನನಗೆ ಮತ್ತು ನಮ್ಮ ಸರ್ಕಾರಕ್ಕೆ ಯಾವತ್ತೂ ಸಹಾನುಭೂತಿ ಇದೆ. ಸಾರಿಗೆ ಸಂಸ್ಥೆಗಳು ನಷ್ಟದಲ್ಲಿದ್ದರೂ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿಯೂ ಸಹ ಎಲ್ಲಾ ಸಿಬ್ಬಂದಿಗಳಿಗೆ ಯಾವುದೇ ಕಡಿತವಿಲ್ಲದೇ ಸಂಬಳ ನೀಡಿದ್ದು ಇದಕ್ಕೆ ನಿದರ್ಶನವಾಗಿದೆ. 

ಕೋವಿಡ್ನಿಂದಾಗಿ ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟ ನೌಕರರ ಕುಟುಂಬದವರಿಗೆ ಇನ್ನು 15 ದಿನಗಳೊಳಗಾಗಿ 30 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಮತ್ತೊಮ್ಮೆ ನಾನು ಭರವಸೆ ನೀಡಿದ್ದೇನೆ. ಇನ್ನು ಸಿಬ್ಬಂದಿ ಉಳಿದ ಬೇಡಿಕೆಗಳ ಬಗ್ಗೆ ಚರ್ಚಿಸಿ ಮಾರ್ಗೋಪಾಯಗಳನ್ನು ಕಂಡುಹಿಡಿಯಲು ನಮ್ಮ ಸರ್ಕಾರ ಅವರೊಂದಿಗೆ ಮಾತುಕತೆ ನಡೆಸಲು ಸದಾ ಸಿದ್ಧವಿದೆ. ಆದ್ದರಿಂದ ಕೋಟ್ಯಂತರ ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ತಕ್ಷಣ ಈ ಮುಷ್ಕರವನ್ನು ಕೈಬಿಟ್ಟು ತಮ್ಮ ಕರ್ತವ್ಯಕ್ಕೆ ವಾಪಸಾಗಬೇಕೆಂದು ನಾನು ನಮ್ಮ ಸಾರಿಗೆ ಸಂಸ್ಥೆಗಳ ಎಲ್ಲಾ ನೌಕರ ಬಾಂಧವರಲ್ಲಿ ಮತ್ತೊಮ್ಮೆ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇನೆ. 

ನಮ್ಮ ಸಾರಿಗೆ ಸಂಸ್ಥೆಗಳ ಯಾವುದೇ ಒಕ್ಕೂಟಕ್ಕೆ ಸೇರಿಲ್ಲದವರು ಏಕಾಏಕಿಯಾಗಿ ಯಾವುದೇ ಮುನ್ಸೂಚನೆ ನೀಡದೇ ಬಸ್ಸು ಸಂಚಾರ ಸ್ಥಗಿತಗೊಳ್ಳುವಂತೆ ಮುಷ್ಕರಕ್ಕೆ ಕರೆಕೊಟ್ಟಿರುವುದು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕರ್ತವ್ಯಕ್ಕೆ ಬಂದ ಕೆಲವು ಸಿಬ್ಬಂದಿಗೆ ತೊಂದರೆ ನೀಡಿರುವುದು ಹಾಗೂ ಸಾರಿಗೆ ಸಂಸ್ಥೆ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿ ಹಾನಿಯಾಗುವಂತೆ ವರ್ತಿಸಿರುವುದು ದುರದೃಷ್ಟಕರವಾಗಿದೆ. 

ಇಂತಹ ಬೆಳವಣಿಗೆಗಳಿಂದ ಸಾರಿಗೆ ಸಂಸ್ಥೆಗಳ ನೌಕರರಿಗೆ ದೊಡ್ಡ ಹಾನಿಯಾಗುವುದಲ್ಲದೇ ಸಾರ್ವಜನಿಕರಿಗೆ ಅನವಶ್ಯಕವಾಗಿ ತೊಂದರೆ ಉಂಟಾಗುವುದಕ್ಕೆ ಕಾರಣವಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸಾರಿಗೆ ಮಿತ್ರರು ಸರ್ಕಾರದೊಂದಿಗೆ ಪರಸ್ಪರ ಸಹಕಾರದೊಂದಿಗೆ ತಮ್ಮ ದೈನಂದಿನ ಕರ್ತವ್ಯ ಮುಂದುವರೆಸಬೇಕೆಂದು ನಾನು ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇನೆ. ಸಾರಿಗೆ ಸಿಬ್ಬಂದಿಗಳೆಂದರೆ ನನಗೆ ನನ್ನ ಕುಟುಂಬವಿದ್ದಂತೆ, ಅವರ ಸಂಕಷ್ಟಗಳಿಗೆ ಸ್ಪಂದಿಸಲು ನಾನು ಸದಾ ಸಿದ್ಧ. ಹಿಂದೆಯೂ ಅನೇಕ ಸಂದರ್ಭಗಳಲ್ಲಿ ಇದನ್ನು ಸಾರಿಗೆ ಸಿಬ್ಬಂದಿ ಮನಗಂಡಿದ್ದಾರೆ. 

ಮುಖ್ಯಮಂತ್ರಿಗಳೂ ಸಹ ಸಾರಿಗೆ ಇಲಾಖೆಯ ಎಲ್ಲಾ ನೌಕರರ ಬೇಡಿಕೆಗಳ ಬಗ್ಗೆ ಉದಾರವಾಗಿ ನಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಮುಂದೆಯೂ ನಮ್ಮ ಸಾರಿಗೆ ಸಿಬ್ಬಂದಿ ತಮ್ಮ ಬೇಡಿಕೆಗಳನ್ನು ತಿಳಿಸಬೇಕೆಂದರೆ ನನ್ನ ಬಳಿ ಬರುವುದಕ್ಕೆ ಸದಾ ಮುಕ್ತ ಅವಕಾಶವಿದೆ. ಈ ಬಗ್ಗೆ ಯಾವುದೇ ಆತಂಕ ಬೇಡ. ನಮ್ಮ ಸಾರಿಗೆ ಒಕ್ಕೂಟಗಳು ಮತ್ತು ಸಿಬ್ಬಂದಿ ತಮ್ಮನ್ನು ಭೇಟಿ ಮಾಡಿ ತಮ್ಮ ಕಷ್ಟಸುಖಗಳನ್ನು ಹೇಳಿಕೊಳ್ಳುವುದಕ್ಕೆ ಸದಾ ಸ್ವಾಗತವಿದೆ ಎಂದು ಸಚಿವರು ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಂಚ ಪಡೆಯುತ್ತಿದ್ದ ಸಚಿವ ಕೆ.ಜೆ ಜಾರ್ಜ್‌ OSD ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ

Russian strike: ಉಕ್ರೇನ್‌ ರೈಲು ನಿಲ್ದಾಣದಲ್ಲಿ ರಷ್ಯಾ 'ಡ್ರೋನ್' ದಾಳಿ; ಓರ್ವ ಸಾವು, 30 ಮಂದಿಗೆ ಗಾಯ! Video

ಬೆಂಗಳೂರು: ವಿವಾಹಿತರ ಅನೈತಿಕ ಸಂಬಂಧ ಸಾವಿನಲ್ಲಿ ಅಂತ್ಯ; Oyo ರೂಂನಲ್ಲಿ ಮಹಿಳೆ ಆತ್ಮಹತ್ಯೆ!

ಪ್ರಧಾನಿ ಮೋದಿ ಜೊತೆಗಿನ ವರ್ಚುವಲ್ ಸಭೆಯಲ್ಲಿ, ಕೈ ಮುಗಿದು ಕುಳಿತ ನಿತೀಶ್ ಕುಮಾರ್; ವ್ಯಾಪಕ ಟೀಕೆ!: Video

ಜಿಲ್ಲೆಗೊಂದು ಮೆಡಿಕಲ್ ಕಾಲೇಜು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವುದು ನನ್ನ ಗುರಿ: ಸಿಎಂ ಸಿದ್ದರಾಮಯ್ಯ

SCROLL FOR NEXT