ರಾಜ್ಯ

ಮುಂದುವರೆದ ಸಾರಿಗೆ ಸಿಬ್ಬಂದಿ ಮುಷ್ಕರ: ಸಂಕಷ್ಟಕ್ಕೆ ಸಿಲುಕಿದ ಪ್ರಯಾಣಿಕರು

Manjula VN

ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ಸಿಬ್ಬಂದಿ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಬೇಡಿಕೆ ಈಡೇರುವವರೆಗೂ ಮುಷ್ಕರ ಮುಂದುವರಿಸಲು ನೌಕರರು ಹಠಹಿಡಿದಿದ್ದು ಇದರಿಂದಾಗಿ ರಾಜ್ಯಾದ್ಯಂತ ಜನಜೀವನ ಭಾಧಿತವಾಗಿದೆ.

ಇಂದು ಯಾವುದೇ ಬಿಎಂಟಿಸಿ ಬಸ್ ಗಳು ರಸ್ತೆಗಿಳಿಯುವುದಿಲ್ಲ. ರಾಜ್ಯಾದ್ಯಂತ ಕೆಎಸ್ಆರ್ಟಿಸಿ ಬಸ್ ಗಳ ಸಂಚಾರ ಕೂಡ ಇರುವುದಿಲ್ಲ ಎನ್ನಲಾಗಿದೆ.

ಸಿಲಿಕಾನ್​ ಸಿಟಿ ಬೆಂಗಳೂರು ಸೇರಿದಂತೆ ಹಾವೇರಿ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ರಾಯಚೂರು, ಶಿವಮೊಗ್ಗ, ತುಮಕೂರು, ಬಾಗಲಕೋಟೆ, ಕಲಬುರಗಿ, ಮೈಸೂರು, ಹುಬ್ಬಳ್ಳಿ, ಬಳ್ಳಾರಿ ಬಸ್ ನಿಲ್ದಾಣಗಳು ಸೇರಿದಂತೆ ಮಂಡ್ಯ, ಕೋಲಾರದ ಕೇಂದ್ರ ಬಸ್ ನಿಲ್ದಾಣಗಳು ಖಾಲಿ ಹೊಡೆಯುತ್ತಿವೆ.

ಬಿಎಂಟಿಸಿ, ಕೆಎಸ್ಆರ್'ಟಿಸಿ ಬಸ್ ಇಲ್ಲದ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡುವ ಸ್ಥಿತಿ ಎದುರಾಗಿದೆ. ಕೆಲವು ಜಿಲ್ಲೆಗಳಲ್ಲಿ ಸಾರ್ವಜನಿಕರು ಖಾಸಗಿ ಬಸ್‌ಗಳ ಮೊರೆ ಹೋಗಬೇಕಾಗಿದೆ. ಮತ್ತೆ, ಕೆಲವೆಡೆ ಜನರು ಅಂತಾರಾಜ್ಯ ಬಸ್‌ಗಳ ಮೊರೆ ಹೋಗುತ್ತಿದ್ದಾರೆ.

ಈ ನಡುವೆ, ಪೊಲೀಸ್ ಭದ್ರತೆಯಲ್ಲಿ ಬಿಎಂಟಿಸಿ ಬಸ್ ಸಂಚಾರಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ, ಮೆಜೆಸ್ಟಿಕ್‌ಗೆ ಎರಡು ಬಿಎಂಟಿಸಿ ಬಸ್‌ಗಳು ಆಗಮಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಕೆಂಪೇಗೌಡ ಬಸ್​ ನಿಲ್ದಾಣದಲ್ಲಿರುವ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಅಲರ್ಟ್ ಮೆಸೇಜ್ ಕಳುಹಿಸಲಾಗಿದ್ದು ಬಸ್​ ಸೇವೆಗೆ ಭದ್ರತೆ ಒದಗಿಸಲು ಸೂಚನೆ ನೀಡಲಾಗಿದೆ. ಜೊತೆಗೆ, ಕೆಲವು ಡಿಪೋಗಳಿಂದ ಬಸ್ ಸಂಚಾರ ಪ್ರಾರಂಭಿಸುವ ಸಾಧ್ಯತೆವಿರುವ ಹಿನ್ನೆಲೆಯಲ್ಲಿ ಪೊಲೀಸ್​ ಸಿಬ್ಬಂದಿಗೆ ಬಸ್ ನಿಲ್ದಾಣಗಳಲ್ಲಿ ಅಲರ್ಟ್ ಆಗಿರುವಂತೆ ಸೂಚನೆ ನೀಡಲಾಗಿದೆ. ಸದ್ಯ, ಕೆಂಪೇಗೌಡ ಬಸ್​ ನಿಲ್ದಾಣ ಸೇರಿದಂತೆ ಶಿವಾಜಿನಗರ ಬಸ್ ನಿಲ್ದಾಣಕ್ಕೂ ಬಿಎಂಟಿಸಿ ಬಸ್ ಆಗಮಿಸುವ ಸಾಧ್ಯತೆಯಿದೆ.

ಇತ್ತ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಹ 4 ವಾಯುವಜ್ರ ಬಸ್‌ಗಳು ಆಗಮಿಸಿದೆ ಎಂದು ಹೇಳಲಾಗಿದೆ. ಪ್ರತಿನಿತ್ಯ 50 ಬಸ್‌ಗಳು 340 ಟ್ರಿಪ್ ಸಂಚಾರ ಮಾಡುತ್ತಿದ್ದವು. ಆದರೆ ಇಂದು 4 ಬಸ್‌ಗಳು ಮಾತ್ರ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ ಎಂದು ವರದಿಗಳು ತಿಳಿಸಿವೆ. 

ತಲೆ ಮೇಲೆ ಚಪ್ಪಲಿಗಳನ್ನಿಟ್ಟುಕೊಂಡು ಸಾರಿಗೆ ನೌಕರರಿಂದ ಪ್ರತಿಭಟನೆ
ಈ ನಡುವೆ ಬೆಳಗಾವಿಯಲ್ಲೂ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರಿಗೆ ನೌಕರರ ಪ್ರತಿಭಟನೆ ಮುಂದುವರಿದಿದೆ.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆಗೆ ಹಾಜರಾದ ನೌಕರರು, ತಲೆ ಮೇಲೆ ಚಪ್ಪಲಿಗಳನ್ನು ಇಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ: ಮೆಟ್ರೋದಿಂದ ಹೆಚ್ಚುವರಿ ಸೇವೆ
ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂದು ಒತ್ತಾಯಿಸಿ, ಸಾರಿಗೆ ನಿಗಮಗಳ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಶನಿವಾರ ಕೂಡ ಮುಂದುವರಿದಿದೆ.

ಈ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಮೆಟ್ರೋ ನಿಗಮ ಹೆಚ್ಚುವರಿ ರೈಲುಗಳನ್ನು ಓಡಿಸಲು ಮುಂದಾಗಿದೆ.

ನೇರಳೆ ಹಾಗೂ ಹಸಿರು ಮಾರ್ಗದಲ್ಲಿ ಹೆಚ್ಚುವರಿ ಮೆಟ್ರೋ ರೈಲುಗಳು ಇಂದು ಸಂಚರಿಸುತ್ತಿವೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರ ಸ್ತಬ್ಧವಾಗಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ಬೆಂಗಳೂರು ಮೆಟ್ರೋದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಬಸ್ ಸಂಚಾರ ಸ್ಥಗಿತವಾಗಿದ್ದರಿಂದ ನಿನ್ನೆ ಮೆಟ್ರೋದಲ್ಲಿ ಜನದಟ್ಟಣೆ ಉಂಟಾಗಿತ್ತು. ಇಂದು ಕೂಡ ಮುಷ್ಕರ ಮುಂದುವರೆದಿರುವುದರಿಂದ ನಮ್ಮ ಮೆಟ್ರೋ ನಿಗಮದ ಬಳಿ ಇರುವ 50 ರೈಲುಗಳನ್ನು ಓಡಿಸಲು ತೀರ್ಮಾನ ಮಾಡಲಾಗಿದೆ.

SCROLL FOR NEXT