ರಾಜ್ಯ

ರೈತಪರ ನಿಲುವಿನ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ: ಸಚಿವ ಸುಧಾಕರ್ ಸವಾಲು 

Srinivas Rao BV

ಚಿಕ್ಕಬಳ್ಳಾಪುರ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಹಿತರಕ್ಷಣೆಗೆ ಕೈಗೊಂಡಿರುವ ತೀರ್ಮಾನಗಳ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಪ್ರತಿಪಕ್ಷಗಳಿಗೆ ಸವಾಲು ಹಾಕಿದ್ದಾರೆ.

ತಾಲ್ಲೂಕು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ 77ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಶನಿವಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಕೃಷಿ ಮಸೂದೆಗಳಿಂದ ಆಗಿರುವ ತೊಂದರೆ ಏನು ಎಂದು ಇತ್ತಿಚೆಗೆ ವಿರೋಧಿಸುವವರು ಯಾರೂ ಹೇಳ್ತಿಲ್ಲ. ರೈತರು ಅವರ ಬೆಳೆಗಳನ್ನು ತಮಗೆ ಬೇಕಾದ ಕಡೆ ಮಾರಾಟ ಮಾಡಲು ಅವಕಾಶಮಾಡಿ ಕೊಟ್ಟರೆ ತಪ್ಪೇನು? ಕೆಲವರು ರಾಜಕಾರಣ ಮಾಡಲು ಜನಪರ ಧೋರಣೆಯನ್ನು ತಪ್ಪಾಗಿ ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಈ ಹೋರಾಟಗಳಿಗೆ ರೈತರು ಬೆಂಬಲ ನೀಡ್ತಿಲ್ಲ. ಕೆಲ ಸಂಘಟನೆಗಳು ಆಮೀಷಕ್ಕೆ ಒಳಗಾಗಿ ಪ್ರತಿಭಟನೆ ಮಾಡುತ್ತಿವೆ. ಭೂಸುಧಾರಣಾ ಕಾಯ್ದೆ ವಿರುದ್ಧದ ಪ್ರತಿಭಟನೆ ಹಿಂದೆ ಕೂಡ ಇದೇ ಉದ್ದೇಶ ಅಡಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಎಂದಿಗೂ ರೈತ ವಿರೋಧಿ ಕಾನೂನನ್ನು ಜಾರಿ ಮಾಡುವುದಿಲ್ಲ. ರೈತರ ಆದಾಯ ದ್ವಿಗುಣ ಗೊಳಿಸಲು ಕೆಲ ಕಾನೂನು ತಿದ್ದುಪಡಿ ಮಾಡಲಾಗಿದೆ. ರೈತರು ಪ್ರತಿಪಕ್ಷಗಳ ದಾರಿತಪ್ಪಿಸುವ ಯತ್ನಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.

ರೈತರ ಬೆಳವಣಿಗೆಗೆ ಕೇಂದ್ರ ಮತ್ತು ರಾಜ್ಯ ಸರಕಾರ ಕೈಗೊಂಡಿರುವ ಕೆಲಸಗಳ ಬಗ್ಗೆ ಬಹಿರಂಗ ಚರ್ಚೆಗೆ ಯಾರು ಬೇಕಾದರೂ ಬರಲಿ. ನಾವು ಚರ್ಚೆಗೆ ಸಿದ್ಧವಿದ್ದೇವೆ. ರಾಜಕಾರಣ ಮಾಡುವ ಸಲುವಾಗಿ ರೈತರನ್ನು ಬಲಿಪಶು ಮಾಡಲು ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಸವಾಲು ಹಾಕಿದರು.

ಪಿಎಲ್ ಡಿ ಬ್ಯಾಂಕು ಸಣ್ಣ ಕಟ್ಟಡದಿಂದ ಸುಸಜ್ಜಿತ ಕಟ್ಟಡದಲ್ಲಿ ಕಾರ್ಯಕ್ರಮ ಮಾಡುತ್ತಿರುವುದು ಅತ್ಯಂತ ಸಂತೋಷ ತಂದಿದೆ. ನಮ್ಮ ಆಶಯಕ್ಕೆ ಪೂರಕವಾಗಿ ಬ್ಯಾಂಕ್ ನ ಆಡಳಿತ ಮಂಡಳಿ ಕೆಲಸ ಮಾಡಿದೆ ಎಂದು ಶ್ಲಾಘಿಸಿದರು.

ಸಹಕಾರಿ ಕ್ಷೇತ್ರ ರೈತರ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗಿದೆ. ಕಳೆದ 70 ವರ್ಷಗಳ ಅಭಿವೃದ್ಧಿಯನ್ನು ಐದು ವರ್ಷ ದಲ್ಲಿ ಮಾಡುವ ಸವಾಲಿನೊಂದಿಗೆ ಕೆಲಸ ಮಾಡಿದ್ದಕ್ಕೆ ಬ್ಯಾಂಕ್ ಈ ಮಟ್ಟದ ಬೆಳವಣಿಗೆ ಕಾಣಲು ಸಾಧ್ಯವಾಗಿದೆ. ಆದರ್ಶದ ನಾಯಕತ್ವ ಮತ್ತು ಪ್ರೇರಣಾಶಕ್ತಿ ಇಂತಹ ಕೆಲಸಗಳಿಗೆ ಅಗತ್ಯವಿದೆ. ನನಗೆ ಆ ಕೆಲಸ ಮಾಡಿದ ತೃಪ್ತಿ ಇದೆ ಎಂದರು.

ತಾಲ್ಲೂಕಿನಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಹೆಚ್ಚು. ಅವರಿಗೆ ವಾಣಿಜ್ಯ ಬೆಳೆ ಬೆಳೆಯಲು ಪ್ರೋತ್ಸಾಹ ನೀಡಬೇಕಿದೆ. ಪ್ರಗತಿಪರ ರೈತರು ನಮ್ಮಲ್ಲಿದ್ದಾರೆ, ಅವರಿಗೆ ಬ್ಯಾಂಕು ಬೆನ್ನೆಲುಬು ಆಗಬೇಕಿದೆ ಎಂದು ಕಿವಿಮಾತು ಹೇಳಿದರು. ಕೆಲವೇ ವರ್ಷಗಳಲ್ಲಿ ಎತ್ತಿನಹೊಳೆ ನೀರನ್ನು ತಂದು ತಾಲ್ಲೂಕಿನ ಕೆರೆಗಳನ್ನು ತುಂಬಿಸಲಿದ್ದೇನೆ. ಹೆಚ್ಚಿನ ಹಣಕ್ಕೆ ಪ್ರತಿ ಸಂಪುಟ ಸಭೆಯಲ್ಲಿ ಆಗ್ರಹಿಸಿದ್ದೇನೆ. ನದಿ ನೀರಿನಲ್ಲಿ ಇನ್ನೂ ನಮ್ಮ ಪಾಲಿನ ನೀರು ಬರಬೇಕಿದೆ. ಆ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವರ ಜತೆ ಮಾತನಾಡಿದ್ದೇನೆ. ಮುಂದೆ ಆ ಕೆಲಸವು ಆಗುತ್ತದೆ. ನಮ್ಮಕಷ್ಟಸಹಿಷ್ಣು ರೈತರಿಗೆ ಬೇಕಿರುವ ಕೈಗಾರಿಕೆಗಳನ್ನು ಮಾಡಬೇಕಿದೆ. ಈಗಾಗಲೇ ಆ ಬಗ್ಗೆ ಕೂಡ ಸಚಿವರ ಜತೆ ಮಾನಾಡಿದ್ದೇನೆ. ದ್ರಾಕ್ಷಿ ಬೆಳೆಗಾರರ ಸಂಘ ಕೂಡ ಸ್ಥಾಪನೆ ಮಾಡಬೇಕಿದೆ. ಅದಕ್ಕೆ ನಾನೇ ಮುನ್ನುಡಿ ಬರೆಯುತ್ತೇನೆ ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾದ ಕೇಶವರೆಡ್ಡಿ, ಬ್ಯಾಂಕಿನ ಅಧ್ಯಕ್ಷ ಪಿ. ನಾಗೇಶ್, ಮಾವು ಮಂಡಳಿ ಅಧ್ಯಕ್ಷ ನಾಗರಾಜು, ತಾಲ್ಲೂಕು ಪಂಚಾಯತಿ ಅಧ್ಯಕ್ಷ ರಾಮಸ್ವಾಮಿ, ಜಿಲ್ಲಾ ಪಂಚಾಯತಿ ಸದಸ್ಯ ಕೃಷ್ಣಮೂರ್ತಿ, ಮುಖಂಡರಾದ ಗೋವಿಂದಸ್ವಾಮಿ, ಚನ್ನಕೇಶವ ರೆಡ್ಡಿ, ನಾಗೇಶ್, ಮೋಹನ್, ಪಿಳ್ಳಪ್ಪ, ಮಿಲ್ಟನ್ ವೆಂಕಟೇಶ, ನಾರಾಯಣಪ್ಪ, ಅಶ್ವತ್ಥಪ್ಪ, ಕೊಂಡಪ್ಪ, ನಾಗೇಶ್, ಕೃಷ್ಣಮೂರ್ತಿ, ಚಂದ್ರಣ್ಣ, ರಾಜಣ್ಣ, ಕೃಷ್ಣಾರೆಡ್ಡಿ, ನಾರಾಯಣಪ್ಪ, ಆನಂದ್, ತಿರುಮಲಪ್ಪ, ಆನಂದ್, ಸಾವಿತ್ರಮ್ಮ, ಮಂಜುಳಾ, ನಾಗೇಶ್, ಗವಿಯಪ್ಪ, ವೆಂಕಟಸ್ವಾಮಿ, ಲವಣ್ಣ, ನಂಜುಂಡಪ್ಪ, ಕಾಳೇಗೌಡ, ಮುನಿಸ್ವಾಮಿ, ಪ್ರಸಾದ್ ಹಾಗೂ ಬ್ಯಾಂಕಿನ ಸದಸ್ಯರು ಹಾಜರಿದ್ದರು.

SCROLL FOR NEXT