ರಾಜ್ಯ

ಸಾರಿಗೆ ನೌಕರರ ಹೋರಾಟಕ್ಕೆ ಕಾಂಗ್ರೆಸ್, ಜೆಡಿಎಸ್ ಬೆಂಬಲ

Manjula VN

ಬೆಂಗಳೂರು: ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ಸತತ ಎರಡನೇ ದಿನವಾದ ಶನಿವಾರ ರಾಜ್ಯ ಸಾರಿಗೆ ಸಂಸ್ಥೆ ನೌಕರರು ಮುಂದುವರೆಸಿದ ಮುಷ್ಕರಕ್ಕೆ ಕಾಂಗ್ರೆಸ್, ಜೆಡಿಎಸ್ ಸಾಥ್ ನೀಡಿದೆ. 

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜಯನಗರ ಶಾಸಕಿ ಆರ್. ಸೌಮ್ಯರೆಡ್ಡಿ, ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷರಾದ ಪುಟ್ಟಸ್ವಾಮಿ ಗೌಡ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ್ ಅವರು ಬೆಂಗಳೂರಿನ ಬನಶಂಕರಿಯಲ್ಲಿ ನಡೆದ ಧರಣಿಯಲ್ಲಿ ಪಾಲ್ಗೊಂಡರು. 

ಈ ವೇಲೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ವಿವಿಧ ಸಾರಿಗೆ ನಿಗಮ ಹಾಗೂ ಬಿಎಂಟಿಸಿ ನೌಕರರ ಪರವಾಗಿ ಕಾಂಗ್ರೆಸ್ ನಿಲ್ಲಲಿದೆ. ಹಗಲು-ರಾತ್ರಿ ಜನರ ಸೇವೆಗೆ ಶ್ರಮಿಸುತ್ತಿರುವ ಸಾರಿಗೆ ನೌಕರರು ಕೊರೋನಾ ಸಮಯದಲ್ಲಿ ಮಾಡಿದ ಶ್ರಮ ಮತ್ತು ತ್ಯಾಗವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ರಾಜ್ಯದಲ್ಲಿ ಬಿಎಂಟಿಸಿ ಹಾಗೂ ಸಾರಿಗೆ ನಾಲ್ಕು ನಿಗಮಗಳಿಂದ 1.25 ಲಕ್ಷ ಸಾರಿಗೆ ನೌಕರರು ಕಾರ್ಯ ನಿರ್ವಹಿಸುತ್ತಿದ್ದು, 40 ಕೋಟಿ ಜನರಿಗೆ ಸೇವೆ ನೀಡುತ್ತಿರುವ ನಿಮಗೆ ಸರ್ಕಾರ ಖಂಡಿತವಾಗಿಯೂ ರಕ್ಷಣೆ ನೀಡಬೇಕಿದೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸಾರಿಗೆ ಸಚಿವರು ಎಲ್ಲಿದ್ದಾರೆಂಬುದೇ ತಿಳಿದಿಲ್ಲ. ಬೇರೆ ಸಚಿವರು ಕೂಡ ಮನವಿ ಆಲಿಸುತ್ತಿಲ್ಲ. ಆದ್ದರಿಂದ ಸಾರಿಗೆ ನೌಕರರಿಗೆ ನ್ಯಾಯಕೊಡಿ ಎಂದು ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ನಾನೇಮನವಿ ಮಾಡುವೆ ಎಂದು ಭರವಸೆ ನೀಡಿದರು. 

ಈ ನಡುವೆ ಜೆಡಿಎಸ್ ನಾಯಕ ಕುಮಾರಸ್ವಾಮಿಯವರು ಮಾತನಾಡಿ, ಸಾರಿಗೆ ನೌಕರರು ಸರ್ಕಾರದೊಂದಿಗೆ ಮಾತುಕತೆ ನಡೆಸುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಸಾರ್ವಜನಿಕರಿಗೆ ಸಮಸ್ಸೆಯಾಗುವುದನ್ನು ನಿಯಂತ್ರಿಸಬೇಕು. ಸರ್ಕಾರ ಕೂಡ ಪ್ರತಿಭಟನೆ ಅಂತ್ಯಗೊಳಿಸಲು ಸಾರಿಗೆ ನೌಕರರೊಂದಿಗೆ ಮಾತುಕತೆ ನಡೆಸಲು ಆಹ್ವಾನ ನೀಡಬೇಕೆಂದು ತಿಳಿಸಿದ್ದಾರೆ. 

SCROLL FOR NEXT