ರಾಜ್ಯ

ಸಾರಿಗೆ ಸಂಧಾನದ ಹೈಡ್ರಾಮಾ: ಮತ್ತೆ ಮುಷ್ಕರ ಮುಂದುವರೆಸುವುದಾಗಿ ಹೇಳಿದ ನೌಕರರ ಒಕ್ಕೂಟದ ಅಧ್ಯಕ್ಷ

Vishwanath S

ಬೆಂಗಳೂರು: ವಿಕಾಸಸೌಧದಲ್ಲಿ ನಡೆದ ಸಚಿವರೊಂದಿಗಿನ ಸಭೆ ಬಳಿಕ ಸಂಧಾನ ಯಶಸ್ವಿಯಾಗಿದೆ ಎಂದು ಹೇಳಿದ್ದ ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರು ಅವರು ಪ್ರತಿಭಟನಾ ಸ್ಥಳಕ್ಕೆ ತೆರಳಿದ ನಂತರ ಮುಷ್ಕರ ಮುಂದುವರೆಸುವುದಾಗಿ ಹೇಳಿದ್ದಾರೆ.

ಸಚಿವರಾದ ಬಸವರಾಜ ಬೊಮ್ಮಾಯಿ, ಆರ್ ಅಶೋಕ್ ಮತ್ತು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಜೊತೆ ಒಕ್ಕೂಟದ ಸದಸ್ಯರು ಮಾತುಕತೆ ನಡೆಸಿದ್ದರು. ಮಾತುಕತೆ ಬಳಿಕ ಮಾತನಾಡಿದ್ದ ಚಂದ್ರು ಅವರು ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಲು ಒಪ್ಪಿದೆ ಎಂದು ಹೇಳಿದ್ದರು. ಇದಾದ ಬಳಿಕ ಮೆಜೆಸ್ಟಿಕ್ ನಿಂದ ಹಲವು ಕೆಎಸ್ಆರ್ಟಿಸಿ ಬಸ್ ಗಳು ಸಹ ಸಂಚಾರ ಆರಂಭಿಸಿದ್ದವು. ಆದರೆ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ತೆರಳಿದ ನಂತರ ಉಲ್ಟಾ ಹೊಡೆದಿರುವ ಚಂದ್ರು ಮುಷ್ಕರವನ್ನು ಮುಂದುವರೆಸುವುದಾಗಿ ಹೇಳಿದ್ದಾರೆ. ಅಲ್ಲದೆ ಸರ್ಕಾರ ಜೊತೆಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಬೇಕಿದೆ ಎಂದಿದ್ದಾರೆ.

ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವುದಿಲ್ಲ ಎಂಬ ಬೇಡಿಕೆಯನ್ನು ಬಿಟ್ಟು ಉಳಿದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸಮ್ಮತಿಸಿತ್ತು. ಆದರೆ ಪ್ರತಿಭಟನಾ ನಿರತ ನೌಕರರು ಇದನ್ನು ಒಪ್ಪುತ್ತಿಲ್ಲ. ಹೀಗಾಗಿ ಸಂಧಾನ ವಿಫಲವಾಗಿದ್ದು ಮುಷ್ಕರ ಮುಂದುವರೆಯಲಿದೆ. 

ಇದರಿಂದಾಗಿ ನಾಳೆಯಿಂದ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ಗಳು ರಸ್ತೆಗಿಳಿಯದ ಕಾರಣ ಜನ ಸಾಮಾನ್ಯರು ಮತ್ತೆ ತೊಂದರೆ ಅನುಭವಿಸುವಂತಾಗುತ್ತದೆ.

ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರು ಎಂದು  ಪರಿಗಣಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ವಿವಿಧ ಸಾರಿಗೆ ನೌಕರರ ಸಂಘಟನೆಗಳು ಕಳೆದ ಮೂರು ದಿನಗಳಿಂದ ಮುಷ್ಕರದಲ್ಲಿ ನಿರತರಾಗಿವೆ.

SCROLL FOR NEXT