ರಾಜ್ಯ

ಗೂಂಡಾ ಕಾಯ್ದೆಯಡಿ ಕುಖ್ಯಾತ ರೌಡಿ ಶೀಟರ್ ಬಂಧಿಸಿದ ಸಿಸಿಬಿ

Nagaraja AB

ಬೆಂಗಳೂರು: ಸಿಸಿಬಿ ಪೊಲೀಸರು ಪಶ್ಚಿಮ ವಿಭಾಗದ ಕುಖ್ಯಾತ ರೌಡಿಶೀಟರ್ ಓರ್ವನನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಿದ್ದಾರೆ. ಕಾರ್ತಿಕ್ ಅಲಿಯಾಸ್ ಉಲ್ಲಾಳ ಕಾರ್ತಿಕ್ ಬಂಧಿತ ಆರೋಪಿ.  ನಗರದ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ ಕಾರ್ತಿಕ್ ನನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಿ ಸಿಸಿಬಿ ಪೊಲೀಸರು  ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಾರ್ತಿಕ್ ತನ್ನ ಸಹಚರ ರೊಂದಿಗೆ ಸೇರಿ ಪಶ್ಚಿಮ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಯ ಇಂಜಿನಿಯರಿಂಗ್ ಕಾಲೇಜ್, ಮೆಡಿಕಲ್ ಕಾಲೇಜುಗಳಲ್ಲಿ ಗಾಂಜಾ ಸರಬರಾಜ ಮಾಡುತ್ತಿದ್ದ ಎನ್ನಲಾಗಿದೆ. 

ಗಾಂಜಾ ಪೂರೈಕೆ ತಡೆಯಲು ಬಂದ ಮಾಹಿತಿದಾರರು ಹಾಗೂ ಎದುರು ತಂಡದವರು ಸೇರಿ ಒಟ್ಟು 5 ಕೊಲೆ, 3 ಕೊಲೆ ಯತ್ನ , 4 ಎನ್.ಡಿ.ಪಿಎಸ್ ಪ್ರಕರಣಗಳು ಹಾಗೂ  ಈತನನ್ನು ಬಂಧಿಸಲು ಮುಂದಾಗಿದ್ದ ಪೊಲೀಸರ ಮೇಲೆ ಹಲ್ಲೆ  ಮಾಡಿದ 2 ಪ್ರಕರಣಗಳು ಸೇರಿ ಈತನ ವಿರುದ್ಧ ಒಟ್ಟು 21 ಪ್ರಕರಣಗಳು‌ ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಬೆಂಗಳೂರು ನಗರ ಪಶ್ಚಿಮ ವಿಭಾಗ ಮತ್ತು ರಾಮನಗರ ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರಂತರವಾಗಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಚಟುವಟಿಕೆಗಳಲ್ಲಿ ತೊಡಗಿದ್ದ. ಅಲ್ಲದೇ ಸಾರ್ವಜನಿಕರಿಗೆ ಭಯ ಉಂಟು ಮಾಡುತ್ತಿದ್ದ.

ನಿರಂತರವಾಗಿ ಕೊಲೆ ಮತ್ತು ಕೊಲೆಯತ್ನ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದರಿಂದ ಈತನ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ನಗರ ಪೊಲೀಸ್ ಆಯುಕ್ತರಿಗೆ ಈತನನನ್ನು ಗೂಂಡಾ ಕಾಯ್ದೆ ಅಡಿ ಬಂಧನಕ್ಕೆ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅವರು ನೀಡಿದ ಅನುಮತಿ ಮೇರೆಗೆ ಈತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT