ರಾಜ್ಯ

ಇಂದು ಕೊನೆ ಕಾರ್ತಿಕ ಸೋಮವಾರ: ಬಸವನಗುಡಿಯ ಕಡಲೆಕಾಯಿ ಪರಿಷೆ ಕೊರೋನಾದಿಂದ ರದ್ದು, ಧಾರ್ಮಿಕ ಕಾರ್ಯಕ್ಕೆ ಸೀಮಿತ

Sumana Upadhyaya

ಬೆಂಗಳೂರು: ಇಂದು ಕೊನೆಯ ಕಾರ್ತಿಕ ಸೋಮವಾರ. ಶಿವನ ಆರಾಧನೆಗೆ ಮೀಸಲಾದ ದಿನ. ವಿವಿಧ ಶಿವ ದೇವಾಲಯಗಳಲ್ಲಿ ಇಂದು ವಿಶೇಷ ಪೂಜೆ, ಅಭಿಷೇಕ, ಅಲಂಕಾರ ದಿನವಿಡೀ ನಡೆಯುತ್ತಿರುತ್ತದೆ. 

ಶಿವನ ವಾಹನ ಬಸವ, ಈ ಹೆಸರಿನ ಸ್ಥಳವಾದ ಬಸವನಗುಡಿಯ ಕಡಲೆಕಾಯಿ ಪರಿಷೆ ಭಾರೀ ಜನಪ್ರಿಯ, ಕಾರ್ತಿಕ ಮಾಸದ ಕೊನೆಯ ಸೋಮವಾರದಿಂದ ಎರಡ್ಮೂರು ದಿನ ಇಲ್ಲಿ ಪ್ರತಿವರ್ಷ ಕಡಲೆಕಾಯಿ ಪರಿಷೆ ನೂರಾರು ವರ್ಷಗಳಿಂದ ನಡೆಯುವುದು ವಾಡಿಕೆ.

ಕಡಲೆಕಾಯಿ ಬೆಳೆದ ಹಲವು ಭಾಗಗಳ ರೈತರು ತಮ್ಮ ಬೆಳೆಗಳನ್ನು ಇಲ್ಲಿಗೆ ತಂದು ಬಸವನಗುಡಿ ದೊಡ್ಡ ಗಣೇಶ ದೇವಸ್ಥಾನದ ಮುಂದಿನ ರಸ್ತೆಯ ಇಕ್ಕೆಲಗಳಲ್ಲಿ ಗುಡ್ಡೆ ಹಾಕಿ ಕುಳಿತು ಮಾರಾಟ ಮಾಡುತ್ತಾರೆ. ಕಡಲೆಕಾಯಿ ಜೊತೆಗೆ ಬೇರೆಲ್ಲಾ ವಸ್ತುಗಳು ಇಲ್ಲಿ ಮಾರಾಟಕ್ಕಿದ್ದು ಒಂದು ಸಂತೆಯ ವಾತಾವರಣ.

ಬೆಂಗಳೂರು ನಗರ ಮಂದಿಗೆ ಈ ದಿನ ಬಹಳ ವಿಶೇಷ, ಮಕ್ಕಳು, ಕಾಲೇಜು ಹುಡುಗ-ಹುಡುಗಿಯರು, ಯುವಕ-ಯುವತಿಯರು, ಹೆಂಗಸರು, ಗಂಡಸರು, ವೃದ್ಧರು ಸೇರಿ ಎಲ್ಲರಿಗೂ ಕಡಲೆಕಾಯಿ ಪರಿಷೆಗೆ ಹೋಗಿ ಬರುವುದೆಂದರೆ ಖುಷಿಯ ಸಂಗತಿ. 

ಆದರೆ ಈ ಬಾರಿ ಕೊರೋನಾ ಕಾರ್ಮೋಡ ಈ ಸಂತಸಕ್ಕೆ ಬ್ರೇಕ್ ಹಾಕಿದೆ. ಈ ವರ್ಷ ಬಸವನಗುಡಿ ರಸ್ತೆಯಲ್ಲಿ ಕಡಲೆಕಾಯಿ ಪರಿಷೆ ಇರುವುದಿಲ್ಲ. ಕೊರೋನಾ ಸೋಂಕಿನ ಮುನ್ನೆಚ್ಚರಿಕೆ ಕ್ರಮವಾಗಿ ಸರಳವಾಗಿ ಪರಿಷೆ ಆಚರಿಸಲಾಗುತ್ತಿದ್ದು ಸಂತೆಯ ಬದಲಿಗೆ ದೇವಸ್ಥಾನದಲ್ಲಿ ಧಾರ್ಮಿಕ ಪೂಜಾ ವಿಧಿ ವಿಧಾನಗಳಿಗಷ್ಟೆ ಸೀಮಿತವಾಗಿದೆ. 

ಇಂದು ಕೊನೆಯ ಕಾರ್ತಿಕ ಸೋಮವಾರ ಹಿನ್ನೆಲೆಯಲ್ಲಿ ದೊಡ್ಡ ಗಣೇಶ ದೇವಸ್ಥಾನದಲ್ಲಿ ಗಣೇಶನ ಮೂರ್ತಿಗೆ ವಿಶೇಷ ಬೆಣ್ಣೆ ಅಲಂಕಾರ ಮಾಡಲಾಗಿತ್ತು. 

SCROLL FOR NEXT