ರಾಜ್ಯ

ಕಲಾಪದಲ್ಲಿ ಭಯದ ವಾತಾವರಣವಿತ್ತು: ರಾಜ್ಯಪಾಲರಿಗೆ ಸಭಾಪತಿ ವರದಿ

Lingaraj Badiger

ಬೆಂಗಳೂರು: ಮಂಗಳವಾರ ವಿಧಾನ ಪರಿಷತ್ತಿನಲ್ಲಿ ನಡೆದ ಘಟನಾವಳಿಗಳ ವಿವರವನ್ನು ವಿಧಾನಪರಿಷತ್ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ರಾಜ್ಯಪಾಲರಿಗೆ ವರದಿ ಸಲ್ಲಿಸಿದ್ದಾರೆ.

ಪರಿಷತ್ತಿನಲ್ಲಿ ಕಲಾಪ ಆರಂಭಕ್ಕೂ ಮುನ್ನ ಬೆಳಗ್ಗೆ 11.15ಕ್ಕೆ ಕಾರ್ಯಕಲಾಪ ಪ್ರಾರಂಭಿಸಲು ಬೆಲ್ ಹೊಡೆಯುವಂತೆ ಕಾರ್ಯದರ್ಶಿಗೆ ಸೂಚನೆ ನೀಡಿದ್ದು, ನಾನು ನನ್ನ ಕಚೇರಿಯಲ್ಲಿ ಕುಳಿತಿರುವಾಗ ಪರಿಷತ್ ಕಾರ್ಯದರ್ಶಿ ಕೋರಂ ಬೆಲ್ ಹಾಕಿದರು.

ಬೆಲ್ ಬಂದ್ ಮಾಡುವ ಮೊದಲೇ ಉಪಸಭಾಪತಿ ಏಕಾಏಕಿ ಯಾವುದೇ ಸೂಚನೆ ನೀಡದೆ ಸಭಾಪತಿ ಪೀಠ ಅಲಂಕರಿಸಿದರು. ತಕ್ಷಣ ಸದನದಲ್ಲಿದ್ದ ಬಹುತೇಕ ಸದಸ್ಯರು ಸಭಾಪತಿ ಪೀಠವನ್ನು ಸುತ್ತುವರೆದು, ತಳ್ಳಾಟ, ನೂಕಾಟದಿಂದ ಗೊಂದಲದ ವಾತಾವರಣ ನಿರ್ಮಾಣ ಮಾಡಿ, ಒಬ್ಬರಿಗೊಬ್ಬರು ಕಿರುಚಾಡುತ್ತ, ಕೈಕೈಮಿಲಾಯಿಸುವ ಹಂತಕ್ಕೆ ಗಲಾಟೆ ನಡೆಯುತ್ತಿತ್ತು. ಕೆಲವು ಸದಸ್ಯರು ಪೀಠದ ಮುಂದಿನ ಗ್ಲಾಾಸ್, ಮೈಕ್‌ಗಳನ್ನು ಧ್ವಂಸಗೊಳಿಸುವ ಜೊತೆಗೆ ಪೀಠದ ಮುಂದೆ ಇದ್ದ, ಎಲ್ಲ ದಾಖಲೆಗಳನ್ನು ಹರಿದು ಹಾಕುತ್ತಿದ್ದರು ಎಂದು ವಿವರಿಸಿದ್ದಾರೆ.

ಇನ್ನು ಕೆಲವು ಸದಸ್ಯರು ಸಭಾಪತಿ ಪ್ರವೇಶಿಸುವ ಕಚೇರಿಯ ಬಾಗಿಲನ್ನು ಒಳಗಡೆಯಿಂದ ಚಿಲಕ ಹಾಕಿಕೊಂಡು, ಸಭಾಪತಿಗಳು ಸದನದ ಒಳಗಡೆ ಬರದಂತೆ ತಡೆಯುವ ಪ್ರಯತ್ನಗಳನ್ನು ನಡೆಸಿದ್ದರು. ಈ ಎಲ್ಲ ಅಂಶಗಳನ್ನು ಕಚೇರಿಯಲ್ಲಿ ಕುಳಿತು ಟಿವಿಯಲ್ಲಿ ವೀಕ್ಷಣೆ ಮಾಡಿದ್ದೇನೆ ಸಭಾಪತಿ ತಿಳಿಸಿದ್ದಾರೆ.

ಏತನ್ಮಧ್ಯೆ ಸಭಾಪತಿಯವರ ಪೀಠದಲ್ಲಿ ಅಸೀನರಾಗಿದ್ದ ಉಪಸಭಾಪತಿಯವರನ್ನು ಕೆಲವು ಸದಸ್ಯರು ಬಲವಂತವಾಗಿ ಆ ಸ್ಥಾನದಿಂದ ತೆರವುಗೊಳಿಸಿದ್ದನ್ನು ಸಹ ಗಮನಿಸಿದ್ದು, ತದನಂತರವೂ ಗದ್ದಲ ಮುಂದುವರೆದಿತ್ತು. ಈ ಹಂತದಲ್ಲಿ ವಿಧಾನಪರಿಷತ್ ಸಚಿವಾಲಯದ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು ನನ್ನ ಕಚೇರಿಗೆ ಬಂದು ಸದನದೊಳಗಿನ ಪರಿಸ್ಥಿತಿಯನ್ನು ನನಗೆ ಮನವರಿಕೆ ಮಾಡಿಕೊಟ್ಟು ಸದನದಲ್ಲಿ ಅಧಿಕಾರಿಗಳಿಗೂ ಭಯದ ವಾತಾವರಣ ಇದೆ ಎಂದು ತಿಳಿಸಿದರು.

ಆ ಕೂಡಲೇ ಬೆಲ್ ಆಫ್ ಮಾಡುವಂತೆ ಕಾರ್ಯದರ್ಶಿಯವರಿಗೆ ಸೂಚಿಸಿ ದಂಡನಾಯಕರ ರಕ್ಷಣೆಯೊಂದಿಗೆ ನಾನು ಪೀಠಕ್ಕೆ ತೆರಳಿದಾಗಲೂ ಸದನದಲ್ಲಿ ಸದಸ್ಯರ ಕೂಗಾಟ-ಜಗ್ಗಾಟ ಮುಂದುವರೆದಿತ್ತು. ಜೊತೆಗೆ ಪೀಠದ ಸುತ್ತಲೂ ಸದಸ್ಯರು ಸುತ್ತುವರೆದು ಭಯದ ವಾತಾವರಣವಿತ್ತು. ನಾನು ಪೀಠದಿಂದ ಎಲ್ಲಾ ಸದಸ್ಯರಿಗೆ ಮನವಿ ಮಾಡಿದರೂ ಶಾಂತ ವಾತಾವರಣ ಮೂಡದೇ ಇರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಸದನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿರುವುದಾಗಿ ಹೇಳಿದ್ದಾರೆ.

SCROLL FOR NEXT