ರಾಜ್ಯ

ಏಕಕಾಲದಲ್ಲಿ ಮೂರು ಜಿಲ್ಲೆಯಲ್ಲಿ ಎಸಿಬಿ ದಾಳಿ: ಮುಂದುವರೆದ ಶೋಧ

Nagaraja AB

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಡಿ ಮೂವರು ಸರ್ಕಾರಿ ಅಧಿಕಾರಿಗಳ ನಿವಾಸ, ಅವರ ಆಪ್ತರ ಮನೆಗಳ ಮೇಲೆ ಎಸಿಬಿ ಬೆಳ್ಳಂಬೆಳಗ್ಗೆ ದಾಳಿ ನಡೆಸಿದೆ. ಮೈಸೂರು, ಹಾಸನ ಮತ್ತು ಬೆಳಗಾವಿ ಜಿಲ್ಲಾದ್ಯಂತ 13 ಸ್ಥಳಗಳಲ್ಲಿ ವಿವಿಧ ಎಸಿಬಿ ತಂಡಗಳಿಂದ ದಾಳಿ ಮಾಡಲಾಗಿದೆ.

ಮೈಸೂರಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರಸ್ವಾಮಿ ಅವರ ಚಾಮುಂಡಿ ವಿಹಾರ ಲೇಔಟ್ ನಲ್ಲಿರುವ ವಾಸದ ಮನೆ ಹಾಗೂ ಅವರ ಮಾವನ ಹೆಸರಿನಲ್ಲಿರುವ ಸರಸ್ವತಿಪುರಂ, ಮೈಸೂರಿನಲ್ಲಿರುವ ವಾಸದ ಮನೆ ಹಾಗೂ ಅವರ ತಂದೆ ವಾಸವಾಗಿರುವ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮೂಗನೂರು ಗ್ರಾಮದ ವಾಸದ ಮನೆ, ಅವರ ಸ್ನೇಹಿತ ವಾಸವಿರುವ ಕೆ. ಸಿ. ಬಡಾವಣೆ, ಮೈಸೂರಿನಲ್ಲಿನ ವಾಸದ ಮನೆ ಮತ್ತು ಅವರು ಕರ್ತವ್ಯ ನಿರ್ವಹಿಸುತ್ತಿರುವ ಮೈಸೂರಿನ ಅರಣ್ಯ ಭವನ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದ್ದು, ಪರಿಶೀಲನೆ ಮುಂದುವರೆದಿದೆ ಎಂದು ಎಸಿಬಿ ಮಾಹಿತಿ ನೀಡಿದೆ.

ಇನ್ನು, ಹಾಸನದ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಸಹಾಯಕ ಇಂಜಿನಿಯರ್ ಅಶ್ವಿನಿ ವಿ. ಎನ್ ಅವರ ಕೆಂಪೇಗೌಡ ಮುಖ್ಯ ರಸ್ತೆ, ಉದಯಗಿರಿ, ಹಾಸನದಲ್ಲಿರುವ ವಾಸದ ಮನೆ ಹಾಗೂ ಅವರ ತಂದೆ ವಾಸವಾಗಿರುವ ವಿದ್ಯಾನಗರ, ಹಾಸನದಲ್ಲಿನ ವಾಸದ ಮನೆ ಸೇರಿ ಅವರು ಕರ್ತವ್ಯ ನಿರ್ವಹಿಸುತ್ತಿರುವ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ ಕಚೇರಿ ಮೇಲೆ ದಾಳಿ ಮಾಡಲಾಗಿದ್ದು, ಪರಿಶೀಲನೆ ಮದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೇ, ಬೆಳಗಾವಿಯ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಉಪ ವಿಭಾಗ-1ರ ಸಹಾಯಕ ಅಭಿಯಂತರಾದ ಮನೋಜ್ ಸುರೇಶ್ ಕವಳೇಕರ ಅವರ ಅಯೋದ್ಯನಗರ, ಬೆಳಗಾವಿಯಲ್ಲಿರುವ ವಾಸದ ಮನೆ ಮತ್ತು ಜಿಲ್ಲೆಯ ಖಾನಪೂರ ತಾಲ್ಲೂಕಿನ ಸಂಗರಗಾಳಿ ಗ್ರಾಮದ ಫಾರ್ಮ್ ಹೌಸ್ ಹಾಗೂ ಅವರ ಸಹೋದರಿ ವಾಸವಾಗಿರುವ ಅಯೋದ್ಯನಗರ, ಬೆಳಗಾವಿಯಲ್ಲಿರುವ ವಾಸದ ಮನೆ ಹಾಗೂ ಅವರ ಇನ್ನೊಬ್ಬ ಸಹೋದರಿ ವಾಸವಾಗಿರುವ ಮಹಾದ್ವಾರ ರಸ್ತೆ, ಬೆಳಗಾವಿ ಇಲ್ಲಿರುವ ವಾಸದ ಮನೆ ಮತ್ತು ಅವರು ಕರ್ತವ್ಯ ನಿರ್ವಹಿಸುತ್ತಿರುವ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಕಚೇರಿ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕ ರಾಜ್ಯ ಭಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ವಿವಿಧ ತಂಡಗಳಿಂದ ಸರ್ಕಾರಿ ನೌಕರರ ವಿರುದ್ಧ ದಾಳಿ ಮುಂದುವರೆದಿದ್ದು, ಅವರ ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಎಸಿಬಿ ಮಾಹಿತಿ ನೀಡಿದೆ.

SCROLL FOR NEXT