ರಾಜ್ಯ

ಮೈಲಾರ ಲಿಂಗೇಶ್ವರನಿಗೆ ಬೆಳ್ಳಿಯ ಹೆಲಿಕಾಪ್ಟರ್ ಹರಕೆ ಒಪ್ಪಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

Sumana Upadhyaya

ಬಳ್ಳಾರಿ: ಜಿಲ್ಲೆಯ ಪ್ರಸಿದ್ಧ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಬೆಳ್ಳಿಯ ಹೆಲಿಕಾಪ್ಟರ್ ನೀಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಮ್ಮ ಹರಕೆ ತೀರಿಸಿಕೊಂಡಿದ್ದಾರೆ.

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಪ್ರಸಿದ್ಧ ಕ್ಷೇತ್ರ ಮೈಲಾರಲಿಂಗೇಶ್ವರ ದೇವಸ್ಥಾನದ ಮೇಲೆ ಆಕಾಶದಲ್ಲಿ ಮೂರು ವರ್ಷಗಳ ಹಿಂದೆ ಡಿ ಕೆ ಶಿವಕುಮಾರ್ ಅವರು ಹೆಲಿಕಾಪ್ಟರ್ ನಲ್ಲಿ ಹಾದುಹೋಗಿದ್ದರು. ಇದರಿಂದಾಗಿ ಅವರು ಕ್ಷೇತ್ರಕ್ಕೆ ಅಪಚಾರ ಎಸಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ನಂತರ ಅವರಿಗೆ ಸಂಕಷ್ಟಗಳೇ ಎದುರಾದವು. ಅವರ ಮೇಲೆ ಎರಡು-ಮೂರು ಬಾರಿ ಐಟಿ ಇಲಾಖೆ ದಾಳಿ ನಡೆಯಿತು, ತಿಹಾರ್ ಜೈಲಿಗೂ ಹೋಗಿ ಬಂದರು. ಮೈಲಾರಲಿಂಗನ ಶಾಪ ಎಂದು ಹೇಳಲಾಗುತ್ತಿತ್ತು.

ಶಾಪ ವಿಮೋಚನೆ ಮಾಡಲು ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ ಹರಕೆ ಒಪ್ಪಿಸಿ ಎಂದು ದೇವಾಲಯದ ಗುರುಗಳು ಹೇಳಿದರಂತೆ. ಆ ಪ್ರಕಾರ ಇಂದು ಬೆಳಗ್ಗೆ ಕಾಂಗ್ರೆಸ್ ನ ಕೆಲವು ಮುಖಂಡರೊಂದಿಗೆ ದೇವಸ್ಥಾನಕ್ಕೆ ಬಂದು ಜಲಸ್ನಾನ ಸೇವೆ ಮಾಡಿಸಿಕೊಂಡು ವಿಶೇಷ ಪೂಜೆ ಸಲ್ಲಿಸಿ ದೇವರಿಗೆ ಬೆಳ್ಳಿಯ ಹೆಲಿಕಾಪ್ಟರ್ ನ್ನು ಹರಕೆ ಸಲ್ಲಿಸಿದ್ದಾರೆ.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಮಾಹಿತಿ ಕೊರತೆಯಿಂದ ಈ ಕ್ಷೇತ್ರಕ್ಕೆ ಹೆಲಿಕಾಪ್ಟರ್ ನಲ್ಲಿ ಮೂರು ವರ್ಷಗಳ ಹಿಂದೆ ಬಂದು ಹೋಗಿದ್ದೆ. ಇದರಿಂದ ಕ್ಷೇತ್ರದ ಧಾರ್ಮಿಕ ಪರಂಪರೆಗೆ ಅಪಚಾರವಾಗಿದೆ ಎಂದು ಅರಿವಾಯಿತು. ನಮ್ಮ ಕಾರ್ಯಕರ್ತರು, ಮುಖಂಡರು ದೋಷ ಪರಿಹಾರವಾಗಿ ಈಗಾಗಲೇ ಪೂಜೆ ಸಲ್ಲಿಸಿದ್ದಾರೆ. ಅವರ ಅಭಿಲಾಷೆಯಂತೆ ದೇವರಲ್ಲಿ ಕ್ಷಮೆ ಕೇಳಿ ಬೆಳ್ಳಿ ಹೆಲಿಕಾಪ್ಟರ್ ಅರ್ಪಿಸಿದ್ದೇನೆ ಎಂದರು. 

SCROLL FOR NEXT