ರಾಜ್ಯ

ವ್ಯಕ್ತಿಯನ್ನು 3 ತಿಂಗಳು ಕೂಡಿಟ್ಟಿದ್ದ ಅಂತಾರಾಜ್ಯ ವಂಚಕನ ಬಂಧಿಸಿದ ಪೊಲೀಸರು

Srinivasamurthy VN

ಬೆಂಗಳೂರು: ವ್ಯಕ್ತಿಯೊಬ್ಬನನ್ನು ಮೂರು ತಿಂಗಳ ಕಾಲ ಅಕ್ರಮವಾಗಿ ಕೂಡಿಟ್ಟ ಅಂತಾರಾಜ್ಯ ವಂಚಕನನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ.

ಸ್ವರೂಪ್ ಶೆಟ್ಟಿ ಬಂಧಿತ ಆರೋಪಿ. ವಂಚನೆಗೊಳಗಾದ ಅರ್ಶಾದ್ ಎಂಬಾತನನ್ನು ಸ್ವರೂಪ್ ಶೆಟ್ಟಿ ಮೂರು ತಿಂಗಳ ಕಾಲ‌ ಅಕ್ರಮ ಬಂಧನದಲ್ಲಿಟ್ಟಿದ್ದ. ಅರ್ಶಾದ್ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಹೋಟೆಲ್ ನಲ್ಲಿಯೇ ಅರ್ಶಾದ್ ಹಾಗೂ ಆರೋಪಿ ಸ್ವರೂಪ್ ಶೆಟ್ಟಿಗೆ  ಪರಿಚಯವಾಗಿತ್ತು. ಸಮಸ್ಯೆಯೊಂದರ ಪರಿಹಾರಕ್ಕೆ ಆರೋಪಿ ಸ್ವರೂಪ್ ಬಳಿ ಅರ್ಶಾದ್ ಹಣ ಕೇಳಿದ್ದ.

ಈ ವೇಳೆ ಕೇರಳದ ಸ್ವಾಮೀಜಿಯೊಬ್ಬರು 24 ಲಕ್ಷ ರೂ. ಹಣ ಕೊಟ್ಟಿದ್ದರು. ಅದನ್ನು ತೆಗೆದು ಕೊಡಲು 5 ಲಕ್ಷ ರೂ. ಖರ್ಚಾಗುತ್ತದೆ ಎಂದು ಸ್ವರೂಪ್ ಅರ್ಶಾದ್​ನಿಂದ ಹಣ ವಸೂಲಿ ಮಾಡಿದ್ದ. ಆದರೆ 24 ಲಕ್ಷ ರೂ. ಹಣವನ್ನು ಸ್ವರೂಪ್ ಕೊಡದೇ ಇದ್ದಾಗ ತಾನು ಕೊಟ್ಟ ಹಣವನ್ನು  ಅರ್ಶಾದ್​ ವಾಪಾಸ್ ಕೇಳಿದ್ದ. ಈ ವೇಳೆ ಕಾಡುಗೋಡಿ ಅಪಾರ್ಟ್​ಮೆಂಟ್​ ಬಳಿ ಕರೆಸಿಕೊಂಡು ಮೂರು ತಿಂಗಳು ಅಕ್ರಮವಾಗಿ ಬಂಧಿಸಿದ್ದ. ಅಕ್ರಮ ಬಂಧನದಲ್ಲಿ ಅರ್ಶಾದ್​ಗೆ ತೀವ್ರ ಹಿಂಸೆ ನೀಡಿದ್ದ.

ಅಕ್ರಮ ಬಂಧನದಲ್ಲಿಟ್ಟಿದ್ದನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿಸಿದ್ದ ಆರೋಪಿ ಸ್ವರೂಪ್  ಶೆಟ್ಟಿಯಿಂದ ಅರ್ಶಾದ್​ ತಪ್ಪಿಸಿಕೊಂಡು ಬಂದು ದೂರು ನೀಡಿದ್ದ. ಮಂಗಳೂರಿನಲ್ಲೂ ಆರೋಪಿ‌ ಸ್ವರೂಪ್ ಮೇಲೆ 7 ಪ್ರಕರಣಗಳು ದಾಖಲಾಗಿದ್ದು ಪತ್ತೆಯಾಗಿತ್ತು.

ಸದ್ಯ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿರುವ ಕಾಡುಗೋಡಿ ಪೊಲೀಸರು ಈ ಬಗ್ಗೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
 

SCROLL FOR NEXT