ರಾಜ್ಯ

ಹಾವೇರಿಯಲ್ಲಿ ಅಕ್ಷರ ಜಾತ್ರೆ: ಸಾಹಿತ್ಯ ಸಮ್ಮೇಳನ ನಡೆಯುವ ಸ್ಥಳ ಪರಿಶೀಲಿಸಿದ ಮನು ಬಳಿಗಾರ

Lingaraj Badiger

ಹಾವೇರಿ: ಮುಂದಿನ ವರ್ಷ ಫೆಬ್ರುವರಿ 26 ರಿಂದ 28 ರ ವರೆಗೆ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಾಗ ಅಂತಿಮಗೊಳಿಸಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ ಹಾಗೂ ಹಾವೇರಿ ಜಿಲ್ಲಾಡಳಿತ ನಗರದ ಪಿಬಿ ರಸ್ತೆಯಲ್ಲಿರುವ ಜಿ.ಎಚ್. ಕಾಲೇಜು ಪಕ್ಕದ 20 ಎಕರೆ ಹಾಗೂ ಈ ಜಮೀನಿಗೆ ಹೊಂದಿಕೊಂಡ 6ರಿಂದ 8 ಎಕರೆ ಖಾಲಿ ಜಾಗದಲ್ಲಿ ಅಕ್ಷರ ಜಾತ್ರೆ ನಡೆಸಲು ನಿರ್ಧರಿಸಿದೆ.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ ಅವರು ಸ್ಥಳ ಪರಿಶೀಲನೆ ನಡೆಸಿ, ಸಮ್ಮೇಳನಕ್ಕೆ ಅತ್ಯಂತ ಸೂಕ್ತವಾದ ಜಾಗ ಇದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

15 ಸಾವಿರ ನೋಂದಾಯಿತ ಪ್ರತಿನಿಧಿಗಳಿಗೆ ಹಾಗೂ ಸಾಹಿತಿಗಳಿಗೆ, ಗಣ್ಯರಿಗೆ ವಸತಿ ವ್ಯವಸ್ಥೆ ಮಾಡಬೇಕಾಗಿದೆ. ಹಾವೇರಿ ನಗರಕ್ಕೆ 20 ಕಿ.ಮೀ. ವ್ಯಾಪ್ತಿಯಲ್ಲಿರುವ ಹೋಟೆಲ್‍ಗಳು, ಸಮುದಾಯ ಭವನ, ವಿವಿಧ ವಸತಿ ನಿಲಯಗಳನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ದಾವಣಗೆರೆ, ಹುಬ್ಬಳ್ಳಿ, ರಾಣೆಬೆನ್ನೂರುಗಳಲ್ಲೂ ವಸತಿ ವ್ಯವಸ್ಥೆಗೆ ಹೋಟೆಲ್‍ಗಳನ್ನು ಗುರುತಿಸಲಾಗುತ್ತದೆ ಎಂದು ಮನು ಬಳಿಗಾರ ವಿವರಿಸಿದರು.

ಗೃಹ ಸಚಿವರು, ಕೃಷಿ ಸಚಿವರು ಹಾಗೂ ವಿವಿಧ ಶಾಸಕರು ನಿನ್ನೆ ನಡೆಸಿದ ಸಭೆಯಲ್ಲಿ ಸಾಹಿತ್ಯ ಸಮ್ಮೇಳನ ಸಿದ್ಧತೆಗೆ ನಾಂದಿ ಹಾಡಿದ್ದಾರೆ. ಖರ್ಚು ವೆಚ್ಚವಿಲ್ಲದ ಸಿದ್ಧತೆಗಳನ್ನು ಮಾಡಲು ಸಭೆಯಲ್ಲಿ ಚರ್ಚಿಸಲಾಗಿದೆ. ಈ ನಿಟ್ಟಿನಲ್ಲಿ ಸಮಿತಿಗಳು ಕಾರ್ಯೋನ್ಮುಖವಾಗಲಿವೆ. ಹಾಗಾಗಿ ಬೆಂಗಳೂರಿನಿಂದ ನಾನೂ ಸಹ ಹಾವೇರಿಗೆ ಆಗಮಿಸಿ ಸಮ್ಮೇಳನದ ಸಿದ್ಧತೆಯಲ್ಲಿ ಭಾಗಿಯಾಗುವುದಾಗಿ ತಿಳಿಸಿದರು.

86 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನು ಜನವರಿ ಮೊದಲ ವಾರದಲ್ಲಿ ಆಯ್ಕೆ ಮಾಡಲಾಗುವುದು ಎಂದು ಮನು ಬಳಿಗಾರ ಹೇಳಿದ್ದಾರೆ.

SCROLL FOR NEXT