ರಾಜ್ಯ

ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಎಲ್ ಐಸಿ ಅಧಿಕಾರಿಗಳು: ಎಲ್ ಐ ಸಿ ಮೂಲಕವೇ ಭಾಗ್ಯ ಲಕ್ಷ್ಮಿ ಯೋಜನೆ ಜಾರಿಗೆ ಮನವಿ

Srinivas Rao BV

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭಾಗ್ಯ ಲಕ್ಷ್ಮಿ ಯೋಜನೆಯಡಿ ಎಲ್ ಐ ಸಿ ಯವರು ನೀಡಬಹುದಾದ ಅತ್ಯುತ್ತಮ ಕೊಡುಗೆಯ ಕುರಿತು ಪರಿಶೀಲಿಸಿ, ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸುವಂತೆ ತಮ್ಮನ್ನು ಭೇಟಿಯಾದ ಎಲ್ ಐಸಿ ಅಧಿಕಾರಿಗಳಿಗೆ ಸೂಚಿಸಿದರು.

ಇಂದು ಎಲ್ ಐ ಸಿ ವಲಯ ವ್ಯವಸ್ಥಾಪಕಿ ಮಿನಿ ಇಪೆ ಅವರ ನೇತೃತ್ವದ ಎಲ್ ಐಸಿ ಅಧಿಕಾರಿಗಳ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಭಾಗ್ಯ ಲಕ್ಷ್ಮಿ ಯೋಜನೆಯನ್ನು ಎಲ್ ಐ ಸಿ ಮೂಲಕವೇ ಜಾರಿಗೊಳಿಸುವ ಕುರಿತು ಮತ್ತೊಮ್ಮೆ ಪರಿಶೀಲಿಸುವಂತೆ ಮನವಿ ಮಾಡಿತು. 

ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, ಭಾಗ್ಯ ಲಕ್ಷ್ಮಿ ಯೋಜನೆಯಡಿ ನೀವು ನೀಡಬಹುದಾದ ಕೊಡುಗೆಗಳ ಕುರಿತು ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಪರಿಶೀಲಿಸುವುದಾಗಿ ತಿಳಿಸಿದರು.

ಭಾಗ್ಯ ಲಕ್ಷ್ಮಿ ಯೋಜನೆಯಡಿ ರಾಜ್ಯ ಸರ್ಕಾರ ಪಾವತಿಸುತ್ತಿರುವ ಪ್ರಿಮಿಯಂ ಮೊತ್ತಕ್ಕೆ 1 ವರ್ಷದ ವೇಳೆಗೆ 1 ಲಕ್ಷ ರೂ. ನೀಡಲು ಎಲ್ ಐ ಸಿಯು ಅಸಹಾಯಕತೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಭಾರತೀಯ ಅಂಚೆಯ ಸುಕನ್ಯಾ ಸಮೃದ್ಧಿ ಮೂಲಕ ಭಾಗ್ಯ ಲಕ್ಷ್ಮಿ ಯೋಜನೆ ಜಾರಿಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ನಾಗಲಾಂಬಿಕಾ ದೇವಿ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಹೆಣ್ಣುಮಕ್ಕಳಿಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭಾಗ್ಯಲಕ್ಷ್ಮಿ ಯೋಜನೆಯಡಿಯಲ್ಲಿ 80,000 ಖಾತೆಗಳ ನಿರ್ವಹಣೆಗೆ ಭಾರತೀಯ ಅಂಚೆಗೆ ವರ್ಗಾವಣೆ ಮಾಡಲು ಅ.22 ರಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು.

SCROLL FOR NEXT