ರಾಜ್ಯ

ಇಬ್ಬರು ನಿವಾಸಿಗಳಿಗೆ ರೂಪಾಂತರಿ ಕೋವಿಡ್-19 ಸೋಂಕು ದೃಢ: ಬಹುಮಹಡಿ ಕಟ್ಟಡ ಸೀಲ್‌ಡೌನ್‌

Srinivasamurthy VN

ಬೆಂಗಳೂರು: ಬೆಂಗಳೂರಿನ ಸರ್ಕಾರಿ ಬಹುಮಹಡಿ ಕಟ್ಟಡವೊಂದರಲ್ಲಿ ನೆಲೆಸಿದ್ದ ಇಬ್ಬರು ವ್ಯಕ್ತಿಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಿಬಿಎಂಪಿ ಕಟ್ಟಡವನ್ನು ಸೀಲ್‌ಡೌನ್‌ ಮಾಡಿದೆ.

ಕಟ್ಟಡದಲ್ಲಿದ್ದ ತಾಯಿ ಹಾಗೂ ಮಗಳಿಗೆ ಸೋಂಕು ದೃಢಪಟ್ಟಿದ್ದರಿಂದ, ಬಿಬಿಎಂಪಿ ಅಧಿಕಾರಿಗಳು ಕಟ್ಟಡದಲ್ಲಿ 22 ಕುಟುಂಬಗಳನ್ನು ಬೇರೆಡೆಗೆ ವರ್ಗಾಯಿಸಿ ಕ್ವಾರಂಟೈನ್‌ನಲ್ಲಿರಿಸಲು ಯತ್ನಿಸಿದರು. ಆದರೆ, ನಿವಾಸಿಗಳು ಹೊರಬರಲು ನಿರಾಕರಿಸಿದರು. ಬೊಮ್ಮನಹಳ್ಳಿ ವಲಯದ ಉಪ ಆರೋಗ್ಯ ಅಧಿಕಾರಿ  ಡಾ.ಜಿ.ಕೆ.ಸುರೇಶ್, "ಅಪಾರ್ಟ್‌ಮೆಂಟ್ ನಿವಾಸಿಗಳನ್ನು ಸ್ಥಳಾಂತರಿಸಲು ಒಪ್ಪದ ಕಾರಣ, ನಾವು ಅಪಾರ್ಟ್‌ಮೆಂಟ್ ಅನ್ನು ಸೀಲ್‌ಡೌನ್‌ ಮಾಡಿದ್ದೇವೆ. 12 ಮನೆಗಳಲ್ಲಿ 37 ಜನರು ವಾಸಿಸುತ್ತಿದ್ದಾರೆ. ಅವರೆಲ್ಲರೂ ಒಂದೇ ಲಿಫ್ಟ್ ಮತ್ತು ಮೆಟ್ಟಿಲುಗಳನ್ನು ಬಳಸಿದ್ದರಿಂದ ಅವರೆಲ್ಲರೂ ದ್ವಿತೀಯ  ಸಂಪರ್ಕಗಳಾಗಿರುತ್ತಾರೆ. ಎಲ್ಲಾ ಮಾದರಿಗಳನ್ನು ತೆಗೆದುಕೊಂಡು ಆರ್‌ಟಿ ಪಿಸಿಆರ್ ಪರೀಕ್ಷೆಗಳಿಗಾಗಿ ಲ್ಯಾಬ್‌ಗೆ ಕಳುಹಿಸಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.

ಇದು 25 ಫ್ಲಾಟ್​ಗಳಿರುವ ಅಪಾರ್ಟ್​ಮೆಂಟ್ ಆಗಿದ್ದು, ಇಲ್ಲಿನ ನಿವಾಸಿಗಳಲ್ಲಿ ಬಹುತೇಕರು ಐಟಿ-ಬಿಟಿ ಉದ್ಯೋಗಿಗಳು. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಇಬ್ಬರು, ದ್ವಿತೀಯ ಸಂಪರ್ಕದಲ್ಲಿ 35 ಮಂದಿ ಇರುವುದು ಗೊತ್ತಾಗಿದೆ. ಸುಮಾರು 40 ಮಂದಿಯನ್ನು ಅಪಾರ್ಟ್​ಮೆಂಟ್​ನಿಂದ ಶಿಫ್ಟ್​ ಮಾಡಿ, ಸಾಂಸ್ಥಿಕ  ಕ್ವಾರಂಟೈನ್ ಮಾಡುವ ಉದ್ದೇಶದಿಂದ ಇಲ್ಲಿಗೆ ಬಿಬಿಎಂಪಿ ಅಧಿಕಾರಿಗಳು ಆಗಮಿಸಿದ್ದರು. ಆದರೆ ನಿವಾಸಿಗಳು ಮಾತ್ರ ಯಾವುದೇ ಒತ್ತಾಯಕ್ಕೂ ಜಗ್ಗಲಿಲ್ಲ. ನೀವು ಬೇಕಿದ್ದರೆ ಅಪಾರ್ಟ್​ಮೆಂಟ್​ ಅನ್ನು ಸೀಲ್​ಡೌನ್ ಮಾಡಿ.. ನಾವು ಇಲ್ಲೇ ಇರುತ್ತೇವೆ. ನೀವು ಹೋಟೆಲ್​ಗಳಿಗೆ ಕರೆದುಕೊಂಡು ಹೋಗುತ್ತೀರಿ.. ಆದರೆ  ಅಲ್ಲಿನ ಪರಿಸ್ಥಿತಿ ಏನು ಎಂಬುದು ನಮಗೆ ಗೊತ್ತು. ಹಿಂದೆಲ್ಲ ಕ್ವಾರಂಟೈನ್​ ಆಗಿದ್ದವರ ಪರಿಸ್ಥಿತಿ ಹೇಗಿತ್ತು ಎಂಬುದೂ ನಮಗೆ ಗೊತ್ತು. ನೀವು ಕನಿಷ್ಠ ಸೌಲಭ್ಯವನ್ನೂ ನಮಗೆ ಕೊಡೋದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರಂತೂ ನಮಗೆ ಚಿಕ್ಕಮಕ್ಕಳಿದ್ದಾರೆ. ಅವರನ್ನೆಲ್ಲ ಕರೆದುಕೊಂಡು ಬರಲು  ಸಾಧ್ಯವಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸರ್ಕಾರದ ಹೊಸ ನಿಯಮದಂತೆ ಕ್ವಾರಂಟೈನ್​ ಮಾಡಬೇಕು ಎಂದು ಆರೋಗ್ಯ ಸಿಬ್ಬಂದಿ ಎಷ್ಟೇ ಹೇಳಿದರೂ ಅಪಾರ್ಟ್​ಮೆಂಟ್ ನಿವಾಸಿಗಳು ಮಾತ್ರ ಅಪಾರ್ಟ್​ಮೆಂಟ್​ ಬಿಟ್ಟು ಕದಲುತ್ತಿರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಇಡೀ ಕಟ್ಟಡವನ್ನು ಸೀಲ್ ಡೌನ್ ಮಾಡಲಾಯಿತು.

ಸೀಲ್​ಡೌನ್​ಗೆ ನಿರ್ಧಾರ
ಇಡೀ ಅಪಾರ್ಟ್​ಮೆಂಟ್​ನ್ನು ಸೀಲ್​ಡೌನ್​ ಮಾಡಿ, ನಿವಾಸಿಗಳು ಅಲ್ಲಿಯೇ ಉಳಿಯುವಂತೆ ಮಾಡಿದ್ದಾರೆ. 14 ದಿನಗಳವರೆಗೆ ವಸಂತನಗರದ ಅಪಾರ್ಟ್​ಮೆಂಟ್​ ಸೀಲ್​​ ಡೌನ್​ ಆಗಲಿದ್ದು, ಅದನ್ನು ಮತ್ತೂ 14 ದಿನಗಳ ಕಾಲ ವಿಸ್ತರಿಸುವ ಬಗ್ಗೆ ನಂತರ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅಪಾರ್ಟ್​ಮೆಂಟ್​  ಗೇಟ್​ಗೆ ಬೀಗ ಹಾಕಲಾಗಿದ್ದು, ‘ನಾವೀಗ ಗೃಹ ಬಂಧನದಲ್ಲಿ ಇದ್ದೇವೆ..’ ಎಂದು ಭಿತ್ತಿಪತ್ರ ಅಂಟಿಸಿದ್ದಾರೆ. ಅಪಾರ್ಟ್​​ಮೆಂಟ್​ ಸಂಪರ್ಕಿಸುವ ರಸ್ತೆಯನ್ನೂ ಸಹ ಕ್ಲೋಸ್ ಮಾಡಲಾಗಿದೆ.

SCROLL FOR NEXT