ರಾಜ್ಯ

ಚರ್ಚಿನ ಪಾದ್ರಿಯನ್ನೇ ಪ್ರೀತಿಸಿ ಎಂಜಿನಿಯರಿಂಗ್ ಪದವೀಧರೆ ವಿವಾಹ, ಪೋಷಕರಿಂದ ನಾಪತ್ತೆ ಪ್ರಕರಣ ದಾಖಲು!

Raghavendra Adiga

ಬಳ್ಳಾರಿ: ಎಂಜಿನಿಯರಿಂಗ್ ಪದವೀಧರೆಯಾಗಿದ್ದ ಯುವತಿಯೊಬ್ಬಳು ಚರ್ಚ್‌ನ 54 ವರ್ಷದ ಪಾದ್ರಿಯೊಬ್ಬರೊಡನೆ ವಿವಾಹವಾಗಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದ್ದು ಈ ಸಂಬಂಧ ಯುವತಿಯ ಪೋಷಕರು "ಮಗಳ ನಾಪತ್ತೆ ಪ್ರಕರಣ" ದಾಖಲಿಸಿದ್ದಾರೆ. 

ಬಳ್ಳಾರಿಯ ಗುಗರಹಟ್ಟಿಯ ನಿವಾಸಿಯಾಗಿದ್ದ ಯುವತಿ ಬಳ್ಳಾರಿ ನಗರದ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದಳು. ಡಿಸೆಂಬರ್ 16ರಂದು ಕೆಲಸಕ್ಕೆಂದು ಮನೆಯಿಂದ ತೆರಳಿದ್ದ ಆಕೆ ಮತ್ತೆ ಮನೆಗೆ ವಾಪಾಸಾಗಿರಲಿಲ್ಲ. ಅವಳು ಚರ್ಚ್ ನ ಪಾದ್ರಿಯೊಂದಿಗೆ ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಪೋಷಕರು, ಇಲ್ಲಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ದೂರಿನಲ್ಲಿ, ಪಾದ್ರಿ ಚರ್ಚ್‌ಗೆ ಭೇಟಿ ನೀಡುವ ಯುವತಿಯರ ವಿಡಿಯೋ ತೆಗೆಯುತ್ತಿದ್ದ, ಅವರಿಗೆ ಕಿರುಕುಳ ನೀಡುತ್ತಿದ್ದ ಎಂದು ಉಲ್ಲೇಖಿಸಿದ್ದಾರೆ. 

ಆದರೆ ಯುವತಿ ತನ್ನ ಪೋಷಕರ ಆರೋಪವನ್ನು ತಳ್ಳಿ ಹಾಕಿದ್ದು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಆಗಿರುವ ವಿಡಿಯೋ ಕ್ಲಿಪ್‌ನಲ್ಲಿ "ನಾನು ನಾಪತ್ತೆಯಾಗಿಲ್ಲ ಯಾರೂ ತನ್ನನ್ನು ಅಪಹರಿಸಿಲ್ಲ ಎಂದು ಹೇಳಿದ್ದಾಳೆ. ಅಲ್ಲದೆ  ತಾನು ಸ್ವಯಂಪ್ರೇರಣೆಯಿಂದ ಪಾದ್ರಿಯೊಂದಿಗೆ ಹೋಗಿದ್ದೆ, ನಾವಿಬ್ಬರೂ ಡಿಸೆಂಬರ್ 20 ರಂದು ವಿವಾಹವಾಗಿದ್ದೇವೆ "ಎಂದು ಆಕೆ ಸ್ಪಷ್ಟಪಡಿಸಿದ್ದಾಳೆ. ಸಧ್ಯ ತಮಗೆ ಬೆದರಿಕೆ ಇದ್ದು ಇದಕ್ಕಾಗಿ ನಮಗಿಬ್ಬರಿಗೂ ಭದ್ರತೆ ಒದಗಿಸಬೇಕೆಂದು ಯುವತಿ  ಜಿಲ್ಲೆಯ ಪೊಲೀಸ್ ಅಧೀಕ್ಷಕರಿಗೆ ಮನವಿ ಮಾಡಿದ್ದಾಳೆ.

SCROLL FOR NEXT