ರಾಜ್ಯ

ಹಿನ್ನೋಟ 2020: ರಾಜ್ಯದಲ್ಲಿ ಕೊರೋನಾ ವೈರಸ್ ಮಧ್ಯೆ ನಡೆದ ಪ್ರಮುಖ ಘಟನಾವಳಿಗಳು 

Sumana Upadhyaya

2020ನೇ ಸರಿದು 2021ಕ್ಕೆ ಕಾಲಿಡುತ್ತಿದ್ದೇವೆ.ಕೊರೋನಾ ಸಂಕಷ್ಟದಿಂದ ಸತತ ಬಳಲಿ ಹೋಗಿರುವ ಜನತೆ ಒಂದಷ್ಟು ನಿರೀಕ್ಷೆ, ಆಶಾಭಾವನೆ, ಉತ್ಸಾಹಗಳೊಂದಿಗೆ 2021ಕ್ಕೆ ಕಾಲಿಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕಳೆದ ಒಂದು ವರ್ಷ ಏನೇನು ನಡೆಯಿತು ಎಂದು ಮೆಲುಕು ಹಾಕಿ ನೋಡುವುದಾದರೆ:

ಮಿಷನ್ 2020: ಬೆಂಗಳೂರು ನಗರದ ನವೀಕರಣಕ್ಕೆ, ಹೊಸ ಲುಕ್ ಕೊಡಲು, ಬೆಂಗಳೂರಿನ ಅಭಿವೃದ್ಧಿಗೆ ಡಿಸೆಂಬರ್ ನಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಿಷನ್ 2020ನ್ನು ಆರಂಭಿಸಿದ್ದಾರೆ. ಈ ಮಿಷನ್ 2020ಯ ಗುರಿ, ಉದ್ದೇಶ ನಾಲ್ಕು ಅವುಗಳು: ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರು, ನಿಂತ ನೀರಾಗದೆ ಚಲನಶೀಲತೆ ಮತ್ತು ಎಲ್ಲಾ ನಾಗರಿಕರಿಗೆ ಇ-ಸೇವೆಗಳು.

ಮಕ್ಕಳನ್ನು ಶಾಲೆಗೆ ಕರೆತರುವುದು: ಈ ವರ್ಷ ಕೊರೋನಾ ಕಾರಣದಿಂದ ಶಾಲೆಗಳು ಆರಂಭವಾಗಿಲ್ಲ. ನಾಳೆ 10 ಮತ್ತು 12ನೇ ತರಗತಿಗಳು ಪ್ರಾಯೋಗಿಕ ಮಾದರಿಯಲ್ಲಿ ಆರಂಭವಾಗುತ್ತಿದೆ. ಈ ಮಧ್ಯೆ ಖಾಸಗಿ ಶಾಲೆಗಳು ಆನ್ ಲೈನ್ ನಲ್ಲಿ ಮಕ್ಕಳಿಗೆ ತರಗತಿಗಳನ್ನು ನಡೆಸುತ್ತಿವೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಮಕ್ಕಳು ಶಿಕ್ಷಣದಿಂದ ಹಲವರು ವಂಚಿತರಾಗಿದ್ದಾರೆ. ಅದಕ್ಕಾಗಿ ರಾಜ್ಯ ಸರ್ಕಾರ ವಿದ್ಯಾಗಮ ಕಾರ್ಯಕ್ರಮ ಆರಂಭಿಸಿತು. ಹಲವು ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಕೊರೋನಾ ಕಾಣಿಸಿಕೊಂಡು ಅದನ್ನು ಸ್ಥಗಿತಗೊಳಿಸಲಾಯಿತು, ಇದೀಗ ನಾಳೆಯಿಂದ ಮತ್ತೆ ವಿದ್ಯಾಗಮ ಆರಂಭವಾಗಲಿದೆ.

ತ್ಯಾಜ್ಯದಿಂದ ಹಸಿರು ಇಂಧನ: ಬೆಂಗಳೂರು ನಗರದಲ್ಲಿ ಪ್ರತಿದಿನ ಉತ್ಪಾದನೆಯಾಗುವ ತ್ಯಾಜ್ಯ ಟನ್ ಗಟ್ಟಲೆ. ಇವುಗಳನ್ನು ಸುಮ್ಮನೆ ನಿಷ್ಟ್ರಯೋಜಕವಾಗಬಾರದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕರ್ನಾಟಕ ವಿದ್ಯುತ್ ನಿಗಮ ಜೊತೆಗೆ ಒಪ್ಪಂದ ಮಾಡಿಕೊಂಡು 600 ಟನ್ ಗಳಷ್ಟು ತ್ಯಾಜ್ಯಗಳನ್ನು ಇಂಧನವನ್ನಾಗಿ ಮಾರ್ಪಾಡು ಮಾಡುವ ಕಾರ್ಯಕ್ಕೆ ಮುಂದಾಗಿದೆ. ಇದಕ್ಕಾಗಿ ಬೆಂಗಳೂರು ಹೊರವಲಯ ಬಿಡದಿಯಲ್ಲಿ ಘಟಕ ಸ್ಥಾಪಿಸಲಾಗಿದೆ. ಇನ್ನು ಒಂದೂವರೆ ವರ್ಷದಲ್ಲಿ 14 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಘಟಕ 11.5 ಮೆಗಾ ವ್ಯಾಟ್ ವಿದ್ಯುತ್ ನ್ನು ಉತ್ಪಾದಿಸಲಿದೆ.

ಸಮಯದ ಪರೀಕ್ಷೆ: ಕಳೆದ ಮಾರ್ಚ್ ತಿಂಗಳಲ್ಲಿ ಭಾರತಕ್ಕೆ ಕಾಲಿಟ್ಟ ಕೊರೋನಾ ವೈರಸ್ ಏಪ್ರಿಲ್-ಮೇ ಹೊತ್ತಿಗೆ ವ್ಯಾಪಕವಾಗಿತ್ತು. ಮಾರ್ಚ್ ತಿಂಗಳಲ್ಲಿ ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆ ನಡೆಸಲು ಸಾಧ್ಯವಾಗಲಿಲ್ಲ. ನಂಮತರ ಪರ-ವಿರೋಧ ಅಭಿಪ್ರಾಯಗಳ ನಡುವೆ ಜೂನ್ ತಿಂಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಿತು ಶೇಕಡಾ 98ರಷ್ಟು ಸುಮಾರು 7.85 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಕೇವಲ ಒಂದು ವಿಷಯ ಉಳಿದುಕೊಂಡಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಜೂನ್ 18ರಂದು ನಡೆಸಲಾಯಿತು, ಅದರಲ್ಲಿ ಶೇಕಡಾ 96ರಷ್ಟು 5.96 ಲಕ್ಷ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಎರಡೂ ಪರೀಕ್ಷೆಗಳು ಕೊರೋನಾ ಆತಂಕದ ನಡುವೆ ಯಶಸ್ವಿಯಾಗಿ ಮುಗಿಯಿತು.

ಮತ್ತೆ ಆರಂಭಗೊಂಡ ರೈಲ್ವೆ ಸೇವೆ: ವಿಶ್ವದಲ್ಲಿಯೇ ಅತಿದೊಡ್ಡ ಸಂಪರ್ಕವನ್ನು ಹೊಂದಿರುವ ರೈಲು ಸಂಪರ್ಕ ಭಾರತದ್ದು. ಕೊರೋನಾ ಹಿನ್ನೆಲೆಯಲ್ಲಿ ತಿಂಗಳುಗಟ್ಟಲೆ ಸಂಚಾರ ಸ್ಥಗಿತಗೊಂಡಿತ್ತು. ಈಗ ಮೂರು ತಿಂಗಳ ಹಿಂದಷ್ಟೆ ಆರಂಭಗೊಂಡಿದ್ದು, ಜನತೆಗೆ ನಿರಾಳತೆ ಮೂಡಿಸಿತು, ಕೊರೋನಾ ಹಿನ್ನೆಲೆಯಲ್ಲಿ ಅಲ್ಲಲ್ಲಿ ಸಿಕ್ಕಿಹಾಕಿಕೊಂಡಿದ್ದ ಲಕ್ಷಗಟ್ಟಲೆ ವಲಸೆ ಕಾರ್ಮಿಕರನ್ನು ಸುಮಾರು 350 ಶ್ರಮಿಕ ರೈಲುಗಳ ಮೂಲಕ ಅವರ ಊರುಗಳಿಗೆ ಕಳುಹಿಸಿಕೊಡಲಾಯಿತು.

ಜನರ ಸಂಪರ್ಕಕ್ಕೆ ರೈಲು ಯೋಜನೆ: ಕೇಂದ್ರ ಸರ್ಕಾರ 36 ವರ್ಷಗಳ ನಂತರ ಕಳೆದ ಅಕ್ಟೋಬರ್ 7ರಂದು ಉಪನಗರ ರೈಲು ಯೋಜನೆಗೆ ಅನುಮತಿ ನೀಡಿತು. 15 ಸಾವಿರದ 767 ಕೋಟಿ ರೂಪಾಯಿಗಳ ಯೋಜನೆ 148 ಕಿಲೋ ಮೀಟರ್ ನ್ನು ಸಂಪರ್ಕಿಸುತ್ತದೆ. ಪ್ರಯಾಣ ವೆಚ್ಚ 13 ರೂಪಾಯಿಗಳಿಂದ 100 ರೂಪಾಯಿಗಳವರೆಗೆ ಇರುತ್ತದೆ. ಮುಂದಿನ 6 ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಸ್ಮಾರ್ಟ್ ಸಿಟಿಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್: ಬೆಂಗಳೂರು ನಗರದಲ್ಲಿ ಪಾರ್ಕಿಂಗ್ ನದ್ದೇ ಸಮಸ್ಯೆ. ಕಳೆದ ಸೆಪ್ಟೆಂಬರ್ ನಲ್ಲಿ ಇದಕ್ಕಾಗಿ ಬಿಬಿಎಂಪಿ 10 ಪ್ರಮುಖ ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಕನ್ನಿಂಗ್ ಹ್ಯಾಮ್ ರಸ್ತೆ, ಎಂ.ಜಿ.ರಸ್ತೆ, ಸೈಂಟ್ ಮಾರ್ಕ್ ರಸ್ತೆ, ರೆಸಿಡೆನ್ಸಿ ರಸ್ತೆ, ಕಸ್ತೂರ್ ಬಾ ರಸ್ತೆ, ಮಲ್ಯ ಹಾಸ್ಪಿಟಲ್ ರಸ್ತೆ, ವಿಠಲ್ ಮಲ್ಯ ರಸ್ತೆ, ಚರ್ಚ್ ಸ್ಟ್ರೀಟ್ ಮತ್ತು ಆಲಿ ಅಸ್ಕರ್ ರಸ್ತೆಗಳಲ್ಲಿ ಜಾರಿಗೆ ತಂದಿದೆ. 

SCROLL FOR NEXT