ರಾಜ್ಯ

ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಮಂಜುನಾಥ್ ನಿಧನ

Lingaraj Badiger

ಬೆಂಗಳೂರು: ನಾಡಿನ ಹಿರಿಯ ರಾಜಕಾರಣಿ, ಮಾಜಿ ಸಚಿವ, ವಿಧಾನಪರಿಷತ್ತಿನ ಮಾಜಿ ಸಭಾಪತಿ ಡಿ.ಮಂಜುನಾಥ್ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ನಿಧನರಾದರು. ಅವರಿಗೆ ೯೨ ವರ್ಷ ವಯಸ್ಸಾಗಿತ್ತು.

ಕಳೆದ ೧೯೬೭ರಲ್ಲಿ ವಿಧಾನಸಭೆಗೆ ಹಿರಿಯೂರಿನಿಂದ ಚುನಾಯಿತರಾಗಿ ರಾಜ್ಯ ರಾಜಕಾರಣ ಪ್ರವೇಶಿಸಿದ್ದ ಮಂಜುನಾಥ್, ನಂತರ ೧೯೮೩ರಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಯೋಜನೆ, ಕಾರ್ಮಿಕ ಸಚಿವರಾಗಿ , ಧರಂ ಸಿಂಗ್ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ, ಬಳಿಕ ಎಚ್.ಡಿ. ದೇವೇಗೌಡ ಮತ್ತು ಜೆ.ಎಚ್ ಪಟೇಲ್ ಸರ್ಕಾರದಲ್ಲೂ ಸಹ ಸಚಿವಾಗಿ ಕಾರ್ಯನಿರ್ವಹಿಸಿದ್ದರು.

ಮೇಲ್ಮನೆ ಸದಸ್ಯರಾಗಿ ಆಯ್ಕೆಯಾಗಿ ಸಭಾಪತಿ ಆಗಿಯೂ ಕಾರ್ನಿರ್ವಹಿಸಿದ್ದರು. ರಾಜ್ಯ ಜನತಾ ದಳದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಹಿರಿಯ ರಾಜಕಾರಣಿ ಡಿ. ಮಂಜುನಾಥ್, ಕಳೆದ ಕೆಲವು ವರ್ಷಗಳಿಂದ ಸಕ್ರಿಯ ರಾಜಕಾರಣದಿಂದ ದೂರ ಸರಿದು ವಿಶ್ರಾಂತ ಜೀವನ ನಡೆಸುತ್ತಿದ್ದರು.

ಹಿರಿಯೂರಿನ ಜೆಡಿಎಸ್ ಮುಖಂಡ ರತ್ನಾಕರ್ ಅವರ ಪುತ್ರರಾಗಿರುವ ಡಿ.ಮಂಜುನಾಥ್ ದೀರ್ಘ ಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಹಿರಿಯೂರಿನ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಇತ್ತೀಚೆಗೆ ತೀವ್ರ ಅನಾರೋಗ್ಯ ಸಮಸ್ಯೆಯಿಂದಾಗಿ ರಾಜಕೀಯ ಜೀವನದಿಂದ ತಟಸ್ಥರಾಗಿದ್ದು, ಕಳೆದ ಒಂದು ವಾರದ ಹಿಂದೆ ಅವರ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಬೆಂಗಳೂರು ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ 3:30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

SCROLL FOR NEXT