ರಾಜ್ಯ

ಚೀನಾದಿಂದ ಬಂದ ಹುಬ್ಬಳ್ಳಿ ವ್ಯಕ್ತಿಯಲ್ಲಿ 'ಕೊರೊನಾ' ಭೀತಿ; ಪುಣೆಗೆ ರಕ್ತದ ಮಾದರಿ

Sumana Upadhyaya

ಬೆಂಗಳೂರು:ಕೊರೊನಾ ವೈರಸ್ ಭೀತಿ ಕರ್ನಾಟಕಕ್ಕೂ ಕಾಲಿಟ್ಟಿದೆ. ಈಗಾಗಲೇ ಕೊರೊನಾ ವೈರಸ್‌ ಭೀತಿಯಲ್ಲಿರುವ ಚೀನಾದಿಂದ ವಾಪಸ್‌ ಬಂದಿರುವ ಹುಬ್ಬಳ್ಳಿ ಮೂಲದ ವ್ಯಕ್ತಿಯಲ್ಲಿ ಮಾರಕ ಕೊರೊನಾ ವೈರಸ್‌ ತಗುಲಿರುವ ಶಂಕೆ ಮೂಡಿದ್ದು, ಅವರನ್ನು ನಿನ್ನೆ ಹುಬ್ಬಳ್ಳಿಯ ವೈದ್ಯಕೀಯ ವಿಜ್ಞಾನ ಆಸ್ಪತ್ರೆಗೆ ದಾಖಲಿಸಲಾಗಿದೆ.


ಹುಬ್ಬಳ್ಳಿಯ ಕೇಶ್ವಾಪುರ ಮೂಲದ ಸಂದೀಪ ಸಿದ್ದಪ್ಪ ಕೆಳಸಂಗದೆ (39ವ) ಅವರಲ್ಲಿ ಕೊರೊನಾ ವೈರಸ್‌ನ ಕೆಲ ಲಕ್ಷಣಗಳು ಕಂಡುಬಂದಿವೆ. ಜ್ವರ, ಕಫ, ನಿಶ್ಯಕ್ತಿ,ತಲೆನೋವು ಇತ್ಯಾದಿ ಲಕ್ಷಣಗಳು ಸಂದೀಪ್ ಅವರಲ್ಲಿ ಕಂಡುಬಂದಿವೆ. ಸದ್ಯ ಇಲ್ಲಿನ ಕಿಮ್ಸ್‌ ಆಸ್ಪತ್ರೆಯಲ್ಲಿ ದಾಖಲಾಗಿರುವ ಅವರಿಗೆ ವಿಶೇಷ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ರಕ್ತದ ಮಾದರಿಯನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಇಂದು ಅದರ ವರದಿ ಸಿಗಲಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. 


ಹುಬ್ಬಳ್ಳಿಯ ಸಂದೀಪ ಅವರಿಗೆ ಒಂದು ವೇಳೆ ಕೊರೊನಾ ವೈರಸ್‌ ಇರುವುದು ದೃಢಪಟ್ಟರೆ, ಇದು ಕರ್ನಾಟಕದ ಮೊದಲ ಪ್ರಕರಣ ಎಂದು ದಾಖಲಾಗುತ್ತದೆ. 


ಚೀನಾದ ವುಹಾನ್‌ನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದೀಪ, ಜನವರಿ 18ರಂದು ಮುಂಬೈಗೆ ಬಂದಿದ್ದರು. ಅಲ್ಲಿಂದ ಬೆಂಗಳೂರಿಗೆ ಆಗಮಿಸಿ ಶನಿವಾರದವರೆಗೆ ಅಲ್ಲಿಯೇ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು. ಜನವರಿ 21ರಿಂದ ಆರೋಗ್ಯದಲ್ಲಿ ತೀವ್ರ ಏರುಪೇರು ಮತ್ತು ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಮೂಲ ಊರು ಹುಬ್ಬಳ್ಳಿಗೆ ಭಾನುವಾರ ಬಂದಿದ್ದಾರೆ.


ಚೀನಾದ ವುಹಾನ್ ನಲ್ಲಿ ಮೊದಲು ಪತ್ತೆಯಾಗಿದ್ದ ಕೊರೊನಾ ವೈರಸ್ ಈಗ ವಿಶ್ವಾದ್ಯಂತ ಹರಡುತ್ತಿದೆ. 425ಮಂದಿಯನ್ನು ಬಲಿ ಪಡೆದಿದ್ದು, ಭಾರತ ಸೇರಿ ಒಟ್ಟು 24 ರಾಷ್ಟ್ರಗಳಿಗೆ ವೈರಸ್ ಹರಡಿದೆ.


ಈ ಮಧ್ಯೆ ರಾಜ್ಯ ಆರೋಗ್ಯ ಇಲಾಖೆ ಪ್ರಯಾಣ ಮಾಡುವ ಪ್ರಯಾಣಿಕರು ಜಾಗ್ರತವಾಗಿರುವಂತೆ ಜನರಿಗೆ ಎಚ್ಚರಿಕೆ ನೀಡಿದೆ. ಕೇರಳದಿಂದ ಪ್ರಯಾಣಿಸುವವರು ಮತ್ತು ರಾಜ್ಯದ ಕೊಡಗು, ಮಂಗಳೂರು, ಮೈಸೂರು ಇತ್ಯಾದಿ ಭಾಗಗಳ ಜನರು ಹೆಚ್ಚು ಜಾಗರೂಕರಾಗಿರುವಂತೆ ಸೂಚಿಸಿದೆ. 

SCROLL FOR NEXT