ರಾಜ್ಯ

ಬೆಳಗಾವಿ: ಜಾತ್ರಾ ಮಹೋತ್ಸವದಲ್ಲಿ ಕಲ್ಲು ತೂರಾಟ; ನಾಲ್ವರ ಬಂಧನ

Shilpa D

ಬೆಳಗಾವಿ: ಅನಗೋಳದಲ್ಲಿ ಮರಗಾಯಿದೇವಿ ಜಾತ್ರಾ ಮಹೋತ್ಸವದ ಮೆರವಣಿಗೆ ವೇಳೆ  ಎರಡು ಗುಂಪುಗಳ ನಡುವೆ ಕಲ್ಲುತೂರಾಟ  ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ತಿಲಕವಾಡಿ ಠಾಣೆ ಪೊಲೀಸರು ಅನಗೋಳದ ಹರ್ಷದ್ ಮದನ ಜಾಧವ, ರೋಹಿತ್ ಪಾಟೀಲ,ಉಮೇಶ ಮಾರುತಿ ಶಿಂಧೆ ಹಾಗೂ ಆಕಾಶ ಜಿ. ನನ್ನು ಬಂಧಿಸಿನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

‘ಜಾತ್ರೆ ಹಿನ್ನೆಲೆಯಲ್ಲಿ ಕುಂಭಮೇಳ ಮೆರವಣಿಗೆ ನಡೆದಿತ್ತು. ಈ ಸಂದರ್ಭದಲ್ಲಿ ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. 

ಕೆಲವರ ನಡುವೆ ಘರ್ಷಣೆಯೂ ನಡೆದಿದೆ. ಆಗ ರಸ್ತೆ ಪಕ್ಕದಲ್ಲಿ ಮನೆ ನಿರ್ಮಾಣಕ್ಕೆಂದು ಸಂಗ್ರಹಿಸಿದ್ದ ಇಟ್ಟಿಗೆ ತುಂಡುಗಳು, ಕಲ್ಲುಗಳನ್ನು ತೆಗೆದುಕೊಂಡು ತೂರಾಟ ನಡೆಸಿದ್ದಾರೆ.

ಇದರಿಂದ ಕೆಲವು ವಾಹನಗಳು ಜಖಂ ಆಗಿವೆ. ಮನೆಗಳ ಕಿಟಕಿ ಗಾಜುಗಳು ಪುಡಿಯಾದವು. ಅಂಗಡಿಗಳ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಆತಂಕ ಉಂಟಾಗಿತ್ತು’ ಎಂದು ಸ್ಥಳೀಯರು ಮಾಹಿತಿ ನೀಡಿದರು.

ಸ್ಥಳಕ್ಕೆ ಬಂದ ಪೊಲೀಸರು, ಲಘು ಲಾಠಿಪ್ರಹಾರ ನಡೆಸಿ ಗುಂಪುಗಳನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಕಲ್ಲೇಟಿನಿಂದಾಗಿ ಅನಗೋಳದ ರಘುನಾಥ ಪೇಟೆಯ ಸೂರಜ ಸುರೇಶ ಬಿರ್ಜೆ (20) ಹಾಗೂ ಆಕಾಶ ಶಂಕರ ಜಂಗರುಚೆ (23) ಸೇರಿ ನಾಲ್ವರು ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ರಾಜಹಂಸ ಗಲ್ಲಿಯ ಸಂಕೇತ ಸೋರಟೇಕರ (23) ಎನ್ನುವವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್‌, ಡಿಸಿಪಿ ಸೀಮಾ ಲಾಟ್ಕರ್‌ ಭೇಟಿ ನೀಡಿದ್ದರು.

ಪೊಲೀಸರು ಆ ಪ್ರದೇಶದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿ  ಹಿಂಸಾಚಾರಕ್ಕೆ ಕಾರಣರಾದ ಯುವಕರನ್ನು ಬಂಧಿಸಿದ್ದಾರೆ. 

SCROLL FOR NEXT