ಬೆಂಗಳೂರು: ಪೊಲೀಸರು ಅನುಮತಿ ನೀಡದಿದ್ದರೂ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ 24 ಗಂಟೆಗಳ ಪ್ರತಿಭಟನೆ ನಡೆಸಲಾಗುವುದು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ತಿಳಿಸಿದ್ದಾರೆ
ಬುಧವಾರ ರಾತ್ರಿ ಎಚ್.ಎಸ್. ದೊರೆಸ್ವಾಮಿ ಅವರ ಮನೆಗೆ ಭೇಟಿ ನೀಡಿದ ಎಸ್ ಜೆ ಪಾಳ್ಯ ಪೊಲೀಸರು, ಪ್ರತಿಭಟನೆಗೆ ಅನುಮತಿ ನಿರಾಕರಣೆ ವಿಷಯನ್ನು ತಿಳಿಸಿದ್ದಾರೆ
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಈ ವಿಷಯ ತಿಳಿಸಿದ ದೊರೆಸ್ವಾಮಿ, ಪೊಲೀಸರು ಅನುಮತಿ ನೀಡದಿದ್ದರೂ ಇತರರೊಂದಿಗೆ ಸೇರಿ ಟೌನ್ ಹಾಲ್ ಮುಂಭಾಗ ಧರಣಿ ಮುಂದುವರೆಸಲಾಗುವುದು ಎಂದರು. ಪ್ರಸ್ತುತ ಅಲ್ಲಿ 50 ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದೇ ರೀತಿಯ ಮೂರು ಪ್ರತಿಭಟನೆಗಳು ನಡೆಯತ್ತಿರುವುದರಿಂದ ಅನುಮತಿಯನ್ನು ನಿರಾಕರಿಸಲಾಗಿದೆ. ದೊರೆಸ್ವಾಮಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗುವುದು ಆದರೆ, ಬಂಧನದಿಂದ ತಪ್ಪಿಸಿಕೊಳ್ಳಲು ಕೆಲ ಜನರು ದೊರೆಸ್ವಾಮಿ ಅವರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಎಸ್ ಜೆ ಪಾಳ್ಯ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ತನ್ವೀರ್ ಅಹ್ಮದ್ ಹೇಳಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದಾಗಿನಿಂದಲೂ ಟೌನ್ ಹಾಲ್ ಮುಂಭಾಗ ಪ್ರತಿಭಟನೆ ನಡೆಯುತ್ತಿದ್ದು, ಒಂದು ವೇಳೆ ಸರ್ಕಾರ ಬಗ್ಗದಿದ್ದರೆ ಬಿಜೆಪಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.