ರಾಜ್ಯ

ಬೀದರ್ - ಬೆಂಗಳೂರು ವಿಮಾನ ಸೇವೆಗೆ ಸಿಎಂ ಯಡಿಯೂರಪ್ಪ ಚಾಲನೆ

Shilpa D

ಬೀದರ್: ಬೀದರನಿಂದ ಬೆಂಗಳೂರಿಗೆ ಹಾರಲಿರುವ ಲೋಹದ ಹಕ್ಕಿ ಬೀದರ್ ನಾಗರಿಕ ವಿಮಾನಯಾನ ಸೇವೆಯನ್ನು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ  ಲೋಕಾರ್ಪಣೆಗೊಳಿಸಿದರು.

ನಂತರ ಮಾತನಾಡಿದ ಅವರು, ಎರಡು ನಗರಗಳ ನಡುವಿನ ವೈಮಾನಿಕ ಸೇವೆ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಹೈದರಾಬಾದ್-ಕರ್ನಾಟಕ ಭಾಗದ ಸರ್ವತೋಮುಖ ಅಭಿವೃದ್ಧಿಗೆ ನೆರವಾಗಲಿದೆ. ವಿಶೇಷವಾಗಿ ಬೀದರ್‌ಗೆ ಕೈಗಾರಿಕೋದ್ಯಮಿಗಳು ಆಗಮಿಸಿ ಇಲ್ಲಿ ಹೆಚ್ಚು ಉದ್ಯಮಗಳನ್ನು ಸ್ಥಾಪಿಸಲು ಇದು ಸಹಕಾರಿಯಾಗಲಿದೆ ಎಂದು ಹೇಳಿದರು.

ಸಂಸದರಾದ ಭಗವಂತ ಖೂಬಾ ಹಾಗೂ ಬೀದರ್ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಇನ್ನಿತರ ಗಣ್ಯರೊಂದಿಗೆ ಬೆಂಗಳೂರಿನ ಎಚ್‌ಎಎಲ್ ಅಂತರ್‌ರಾಷ್ಟ್ರೀಯ ವಿಮಾನ ಲ್ದಾಣದಿಂದ ಬೆಳಗ್ಗೆ 9.50ಕ್ಕೆ 72 ಆಸನಗಳುಳ್ಳ ಟ್ರುಜೆಟ್ ವಿಮಾನದಲ್ಲೇ ಬೀದರ್‌ಗೆ ಆಗಮಿಸುವ ಮೂಲಕ ಬೀದರ್-ಬೆಂಗಳೂರು ವಿಮಾನಯಾನ ಸಾಧ್ಯವಾಗಿಸಿದ ಮುಖ್ಯಮಂತ್ರಿ ಅವರಿಗೆ ಪಶು ಸಂಗೋಪಣೆ, ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ ಹಜ್ ಸಚಿವರು ಮತ್ತು ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಹಾಗೂ ಬೀದರ್ ನ ಗಣ್ಯರು, ನಾಗರಿಕರು ಬೀದರ ವಾಯುನೆಲೆಯಲ್ಲಿ ಹಾರ್ದಿಕವಾಗಿ ಸ್ವಾಗತ ಕೋರಿದರು.

ಬಳಿಕ ಚಿದ್ರಿಯ ಬೀದರ ವಿಮಾನ ನಿಲ್ದಾಣದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಅವರು, ಈ ವಿಮಾನಯಾನ ಸೇವೆಯ ಮೂಲಕ ಇನ್ಮುಂದೆ ಬೀದರ್ ಪಟ್ಟಣವು ಬೆಂಗಳೂರಿಗೆ ಸಮೀಪವಾಗಿದೆ. ಇಂತಹ ಸೇವೆಯಿಂದ ಕೈಗಾರಿಕೆಗಳು ಈ ಭಾಗಕ್ಕೆ ಬರಲು ಅನುಕೂಲವಾಗಲಿದೆ. ಬೀದರ್ ಜಿಲ್ಲೆಯ ಜನರ ಅಪೇಕ್ಷೆಯಂತೆ ರಾಜ್ಯ ಸರಕಾರವು ವಿಮಾನಯಾನಕ್ಕೆ ಬೇಕಾಗುವ ಸಹಕಾರ ನೀಡಲಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಬೀದರ್-ಬೆಂಗಳೂರು ವಿಮಾನ ಸಂಚಾರದ ಸಮಯದ ನಿಗದಿಗೆ ಸಂಬಂಧಿಸಿದಂತೆ ನೀಡಿದ ಸಲಹೆ ಅತ್ಯಂತ ಸೂಕ್ತವಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

SCROLL FOR NEXT