ರಾಜ್ಯ

ವಾಯುಪಡೆ ಹೆಲಿಕಾಪ್ಟರ್ ನೆಲೆ ಮೈಸೂರಿಗೆ ಸ್ಥಳಾಂತರ ಇಲ್ಲ

Lingaraj Badiger

ಮೈಸೂರು: ಭಾರತೀಯ ವಾಯುಪಡೆಯ(ಐಎಎಫ್) ಹೆಲಿಕಾಪ್ಟರ್ ತರಬೇತಿ ವಿಭಾಗವನ್ನು ಬೆಂಗಳೂರಿನ ಯಲಹಂಕದಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಕೈಬಿಡುವ ಸಾಧ್ಯತೆ ಇದೆ ಎಂದು ಸಂಸದ ಪ್ರತಾಪ್ ಸಿಂಹ ಮಂಗಳವಾರ ಹೇಳಿದ್ದಾರೆ.

‘ಮೈಸೂರು ವಿಮಾನ ನಿಲ್ದಾಣದಲ್ಲಿ ಯಾವುದೇ ಸೇನಾ ನೆಲೆಗಳನ್ನು ಸ್ಥಾಪಿಸದೆ, ನಿಲ್ದಾಣವನ್ನು ನಾಗರಿಕ ಸೌಲಭ್ಯವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ವಿನಂತಿಸಲಾಗಿತ್ತು. ತಮ್ಮ ಮನವಿಯನ್ನು ಸ್ವೀಕರಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಧನ್ಯವಾದ.’ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.  

ಅಂದಿನ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ನಾಗರಿಕ ಮತ್ತು ಸೇನಾ ಉದ್ದೇಶಗಳೆರಡಕ್ಕೂ ಬಳಕೆಯಾಗುತ್ತಿರುವ ಪುಣೆ, ಚಂಡೀಗಢ ಮತ್ತು ಶ್ರೀನಗರ ವಿಮಾನ ನಿಲ್ದಾಣಗಳ ಮಾದರಿಯಲ್ಲಿ  ಮೈಸೂರು ವಿಮಾನ ನಿಲ್ದಾಣ ಅಭಿವೃದ್ಧಿಪಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.

ಮೈಸೂರು ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಿದರೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ ಎಂದು ಕುಮಾರಸ್ವಾಮಿ ಅವರು ವಾದಿಸಿದ್ದರು. ವಾಯುಪಡೆ ತನ್ನ ಹೆಲಿಕಾಪ್ಟರ್ ನೆಲೆಯನ್ನು ಮೈಸೂರಿಗೆ ಸ್ಥಳಾಂತರಿಸಲು ಅನುಮತಿ ನೀಡುವಂತೆ ಅವರು ವಿಮಾನ ನಿಲ್ದಾಣ ಪ್ರಾಧಿಕಾರವನ್ನು (ಎಎಐ) ಒತ್ತಾಯಿಸಿದ್ದರು. ಈ ಉದ್ದೇಶಕ್ಕಾಗಿ ರಾಜ್ಯ ಸರ್ಕಾರದ ನಿರಾಕ್ಷೇಪಣೆ ಪತ್ರವನ್ನು ಸಹ ನೀಡಿದ್ದರು.

ಆದರೆ, ಈ ಪ್ರಸ್ತಾಪವನ್ನು ವಿರೋಧಿಸಿದ ಪ್ರತಾಪ್ ಸಿಂಹ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಭೇಟಿ ಮಾಡಿ ಯಾವುದೇ ಸೇನಾ ನೆಲೆ ಸ್ಥಾಪಿಸದೆ ಮೈಸೂರು ವಿಮಾನ ನಿಲ್ದಾಣವನ್ನು ನಾಗರಿಕ ವಿಮಾನ ನಿಲ್ದಾಣವಾಗಿ ಕಾರ್ಯನಿರ್ವಹಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು.

ಮೈಸೂರು ವಿಮಾನ ನಿಲ್ದಾಣವನ್ನು ತನ್ನ ಹೆಲಿಕಾಪ್ಟರ್ ನೆಲೆಯಾಗಿ ಸ್ವಾಧೀನಪಡಿಸಿಕೊಳ್ಳುವ ಇಚ್ಛೆಯನ್ನು ವಾಯುಪಡೆ ವ್ಯಕ್ತಪಡಿಸಿದೆ ಎಂಬ ವರದಿಯನ್ನು ಉಲ್ಲೇಖಿಸಿರುವ ಪ್ರತಾಪ್ ಸಿಂಹ, ಕೇಂದ್ರದ ಉಡಾನ್ ಯೋಜನೆ ಜಾರಿಯೊಂದಿಗೆ ಮೈಸೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.

ಮೈಸೂರು ವಿಮಾನ ನಿಲ್ದಾಣವನ್ನು ವಾಯುಪಡೆ ಸ್ವಾಧೀನಕ್ಕೆ ತೆಗೆದುಕೊಂಡು ತನ್ನ ನೆಲೆಯಾಗಿ ಪರಿವರ್ತಿಸಿದರೆ ಇತರ ವಿಮಾನ ನಿಲ್ದಾಣಗಳಲ್ಲಿ ಜಾರಿಯಲ್ಲಿರುವಂತಹ ನಿರ್ಬಂಧಗಳನ್ನು ವಿಧಿಸಬೇಕಾಗುತ್ತದೆ. ಇದು ಪ್ರಯಾಣಿಕರ ದಟ್ಟಣೆಗೆ ಅಡ್ಡಿಯಾಗುತ್ತದೆ. ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲಾಗುವ ರಕ್ಷಣಾ ಸೌಲಭ್ಯಗಳನ್ನು ರಕ್ಷಿಸಲು ಇಂತಹ ನಿರ್ಬಂಧಗಳು ಅಗತ್ಯವಾಗಿವೆ ಎಂದು ಅವರು ಹೇಳಿದ್ದಾರೆ.

SCROLL FOR NEXT