ರಾಜ್ಯ

ಚಿಕ್ಕಮಗಳೂರು: ಕ್ಯಾಸನೂರು ಅರಣ್ಯ ಕಾಯಿಲೆ ಮೂವರಲ್ಲಿ ಪತ್ತೆ 

Sumana Upadhyaya

ಚಿಕ್ಕಮಗಳೂರು: ಕಳೆದ ಭಾನುವಾರ ಸಾಗರ ತಾಲ್ಲೂಕಿನ ಹೊಡಂತೆ ಗ್ರಾಮದಲ್ಲಿ ಮಂಗನ ಸಾವಿನ ಪ್ರಕರಣ ಮತ್ತು ಎನ್ ಆರ್ ಪುರ ತಾಲ್ಲೂಕಿನಲ್ಲಿ ಮಂಗನ ಜ್ವರ ಮಡಬಾರು ಕಾಫಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರಲ್ಲಿ ಪತ್ತೆಯಾದ ನಂತರ ಜಿಲ್ಲೆಯಲ್ಲಿ ತೀವ್ರ ಎಚ್ಚರಿಕೆ ಘೋಷಿಸಲಾಗಿದೆ.


ಮಂಗನ ಜ್ವರದ ಬಗ್ಗೆ ಯಾವ ರೀತಿ ಎಚ್ಚರಿಕೆ ವಹಿಸಬೇಕು, ಕಾಯಿಲೆಯನ್ನು ಯಾವ ರೀತಿ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಕಾಫಿ ಎಸ್ಟೇಟ್ ನೌಕರರಿಗೆ ತಿಳಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ವಿವರಣೆ ನೀಡುತ್ತಿದ್ದಾರೆ. ಡಾ ಸುಭಾಷ್ ನೇತೃತ್ವದ ತಂಡ, 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 6ರಿಂದ 65 ವರ್ಷದೊಳಗಿನವರಿಗೆ ಕ್ಯಾಸನೂರು ಅರಣ್ಯ ಕಾಯಿಲೆ ತಡೆಗಟ್ಟುವ ವೈರಸ್ ಚುಚ್ಚುಮದ್ದನ್ನು ನೀಡುತ್ತಿದ್ದಾರೆ.


ಸುತ್ತಮುತ್ತಲ ಪ್ರದೇಶಗಳನ್ನು ಮುನ್ನೆಚ್ಚರಿಕೆ ಸ್ಥಳವನ್ನಾಗಿ ಘೋಷಿಸಲಾಗಿದ್ದು ಕೆಲವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಸೋಂಕು ಪೀಡಿತರಿಗೆ ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಮಂಗನ ಜ್ವರದ ಬಗ್ಗೆ ಜನರಲ್ಲಿ ರೋಗದ ಲಕ್ಷಣ ಮತ್ತು ತಡೆಗಟ್ಟುವ ಕುರಿತು ಮಾಹಿತಿ ನೀಡುತ್ತಿದ್ದಾರೆ.


ಅರಣ್ಯ ಭಾಗಗಳಲ್ಲಿ ವಾಸಿಸುತ್ತಿರುವವರು ತಮ್ಮ ಶರೀರದಲ್ಲಿ ಉಣ್ಣಿಗಳು ಕಂಡುಬಂದಲ್ಲಿ ತೈಲ ಹಚ್ಚಿ ದೇಹವನ್ನು ಮುಚ್ಚಿಕೊಂಡು ಅರಣ್ಯಗಳಿಗೆ ಹೋಗಬೇಕು. ಅರಣ್ಯದಿಂದ ಹಿಂತಿರುಗಿದ ನಂತರ ದೇಹದಿಂದ ಉಣ್ಣಿಗಳನ್ನು ತೆಗೆಯಬೇಕು. ಧರಿಸಿದ ಬಟ್ಟೆಗಳನ್ನು ಪ್ರತಿನಿತ್ಯ ಬಿಸಿನೀರಿನಲ್ಲಿ ತೊಳೆಯಬೇಕು, ಜ್ವರದ ಲಕ್ಷಣಗಳು ಕಂಡುಬಂದರೆ ನೇರವಾಗಿ ತಡಮಾಡದೆ ಆಸ್ಪತ್ರೆಗೆ ಹೋಗಬೇಕು ಎಂದು ಡಾ ಸುಭಾಷ್ ಹೇಳುತ್ತಾರೆ.


ಮಂಗನ ಜ್ವರ ಕಂಡುಬಂದ ಮೂವರಲ್ಲಿ ಇಬ್ಬರನ್ನು ಮಧ್ಯ ಪ್ರದೇಶಕ್ಕೆ ಚಿಕಿತ್ಸೆಗೆ ಕರೆದುಕೊಂಡು ಹೋಗಲಾಗಿದ್ದು ಮತ್ತೊಬ್ಬರಿಗೆ ಇಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಮಂಗ ಸತ್ತ ಕೂಡಲೇ ಯಾರೂ ಗಾಬರಿಪಡುವ ಅಗತ್ಯವಿಲ್ಲ, ಬದಲಿಗೆ ಅಧಿಕಾರಿಗಳಿಗೆ ತಿಳಿಸಿ ಅಲ್ಲಿ ಮಲಥಿಯಾನ್ ಪುಡಿಗಳನ್ನು ಹಾಕಲಾಗುವುದು ಎಂದು ಡಾ ವೀರಪ್ರಸಾದ್ ತಿಳಿಸಿದ್ದಾರೆ.

SCROLL FOR NEXT