ರಾಜ್ಯ

ಸ್ನೇಹಿತನನ್ನೇ ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟ ಆರೋಪಿ ಬಂಧನ

Raghavendra Adiga

ಬೆಂಗಳೂರು:  ಹಣಕ್ಕಾಗಿ ಸ್ನೇಹಿತನನ್ನೇ ಅಪಹರಿಸಿದ್ದ ಆರೋಪಿಯನ್ನು  ಉತ್ತರ  ವಿಭಾಗದ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ನಗರದ ಮಲ್ಲೇಶ್ವರಂ ನ 27 ವರ್ಷದ ಸೈಯದ್ ರಾಹಿಲ್ ಬಂಧಿತ ಆರೋಪಿ.

ಇದೇ  ತಿಂಗಳ 9ನೇ ತಾರೀಖಿನಂದು ತಾವು ಸಂಬಂಧಿಕರ ಮದುವೆ ಹೋಗಿದ್ದಾಗ ಕೆಆರ್ ಪುರಂನ ಮನೆಯಲ್ಲಿದ್ದ ತಮ್ಮ ಸಹೋದರ ಸುದೀಪ್‌ (27) ಅವರನ್ನು ಅಪಹರಿಸಲಾಗಿದೆ ಎಂದು ಶಬಿತಾ ಶೆಣೈ ಅವರು  ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ನಾವು ಮದುವೆ ಸಮಾರಂಭಕ್ಕೆ ಹೋಗಿ ಮನೆಗೆ ವಾಪಸ್ಸಾದಾಗ ಸುದೀಪ್ ಮನೆಯಲ್ಲಿ ಇರಲಿಲ್ಲ. ಕರೆ ಮಾಡಿದರೂ ಕರೆ ಸ್ವೀಕರಿಸಿರಲಿಲ್ಲ. ಇತ್ತ ತಾಯಿಗೂ ಕರೆ  ಮಾಡಿದಾಗ, ಆತ ಮಲ್ಲೇಶ್ವರಂ ನ‌ ಮನೆಯಲ್ಲಿಯೂ‌ ಇಲ್ಲದಿರುವ ವಿಚಾರ ತಿಳಿಯಿತು. ನಂತರ  ಅಂದೇ ಬೆಳಗ್ಗೆ 9.20ರಂದು ಸುದೀಪ್ ತಮಗೆ ಕರೆ ಮಾಡಿ, ನನ್ನನ್ನು ಕೆಲ ವ್ಯಕ್ತಿಗಳು ಹೊಡೆದು  ಕಾರಿನಲ್ಲಿ ಕರೆದುಕೊಂಡು ಬಂದು ಗೋರಿಪಾಳ್ಯದ ಸ್ಮಶಾನದಲ್ಲಿ ಇಟ್ಟಿದ್ದಾರೆ ಎಂದು ಹೇಳಿ  ಕಾಲ್ ಕಟ್ ಮಾಡಿದ್ದಾನೆ.

 ನಂತರ ಅದೇ ಸಂಖ್ಯೆಯಿಂದ ಸುಮಾರು 11 ಗಂಟೆಗೆ ವ್ಯಕ್ತಿಯೋರ್ವ  ಕರೆ ಮಾಡಿ ಸುದೀಪ್ ನನ್ನು ಅಪಹರಿಸಲಾಗಿದ್ದು, 12 ಲಕ್ಷ ರೂ ಕೊಟ್ಟರೇ, ಆತನನ್ನು  ಬಿಡುಗಡೆಗೊಳಿಸುವುದಾಗಿ ಹೇಳಿ ಕಾಲ್ ಮಾಡಿದ್ದ ಎಂದು ಶಬಿತಾ ಶೆಣೈ ದೂರಿನಲ್ಲಿ ತಿಳಿಸಿದ್ದರು.

ಪ್ರಕರಣದ ಜಾಡು ಹಿಡಿದ ಪೊಲೀಸರು ಸೈಯದ್ ರಾಹಿಲ್ ಎಂಬಾತನನ್ನು ಬಂಧಿಸಿ,‌ಕೃತ್ಯಕ್ಕೆ ಬಳಸಿದ ಕಾರೊಂದು ವಶಪಡಿಸಿಕೊಂಡಿದ್ದಾರೆ.

 ತಾನು  ಮತ್ತು ಸುದೀಪ್ ಇಬ್ಬರೂ 5 ವರ್ಷಗಳಿಂದ ಸ್ನೇಹಿತರಾಗಿದ್ದು, ಸುದೀಪ್ ಆಸ್ತಿ ಪಾಸ್ತಿ  ಬಗ್ಗೆ ಗೊತ್ತಿತ್ತು. ಹೀಗಾಗಿ ಸ್ನೇಹಿತರೊಂದಿಗೆ ಸೇರಿಕೊಂಡು ಹಣಕ್ಕಾಗಿ ಅಪಹರಣ  ಮಾಡಿದ್ದೆ ಎಂದು ಆರೋಪಿ ಸೈಯದ್ ರಾಹಿಲ್, ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಸದ್ಯ ಸೈಯದ್ ಸಹಚರರಾದ ಸುಲ್ತಾನ್ ಮತ್ತು ಆತನ ಸ್ನೇಹಿತರು ಪರಾರಿಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಮಲ್ಲೇಶ್ವರಂ ನ ಪೊಲೀಸ್ ಇನ್ಸ್ ಪೆಕ್ಟರ್ ಎಲ್ ಬಿ ಚಂದ್ರಕಾಂತ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

SCROLL FOR NEXT