ಗಂಗಾವತಿ: ವಿದೇಶಿ ಪ್ರವಾಸಿಗರ ನೆಚ್ಚಿನ ತಾಣ ತಾಲ್ಲೂಕಿನ ವಿರುಪಾಪುರ ಗಡ್ಡಿಯಲ್ಲಿರುವ ಎಲ್ಲಾ ಅನಧಿಕೃತ ರೆಸಾರ್ಟ್, ಹೋ ಸ್ಟೇ ಹಾಗೂ ಅತಿಥಿ ಗೃಹಗಳನ್ನು ತೆರವು ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಸಣಾಪುರ ಗ್ರಾಮದ ಮೀಸಲು ಅರಣ್ಯ ಪ್ರದೇಶವನ್ನು ಅತಿಕ್ರಮಿಸಿ ಹಾಗೂ ಕೃಷಿ ಭೂಮಿಯನ್ನು ಪರಿವರ್ತಿಸದೇ ಅನಧಿಕೃತವಾಗಿ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವ ಹಿನ್ನೆಲೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ಹಾಗೂಕೊಪ್ಪಳ ಜಿಲ್ಲಾಡಳಿತ ತೆರವಿಗೆ ಮುಂದಾಗಿತ್ತು. ಪ್ರಶ್ನಿಸಿ ಗಡ್ಡೆ ಯಲ್ಲಿನ ಸುಮಾರು 15ಕ್ಕೂ ಹೆಚ್ಷು ರೆಸಾರ್ಟ್ ಮಾಲೀಕರು ಧಾರವಾಡದ ಹೈಕೋರ್ಟ್ ಗೆ ದಾವೆ ದಾಖಲಿ ಸ್ಟೇ ತಂದುಕೊಳ್ಳುವಲ್ಲಿ ಮಾಲಿಕರು ಯಶಸ್ವಿಯಾಗಿದ್ದರು.
ಇದನ್ನು ಪ್ರಶ್ನಿಸಿ ದಾಖಲಾಗಿದ್ದ ಸರ್ಕಾರದ ದೂರನ್ನು ಪುರಸ್ಕರಿಸಿ ಬೆಂಗಳೂರಿನ ಕೋರ್ಟ್ ಧಾರವಾಡದ ನ್ಯಾಯಾಲಯದ ಸ್ಟೇ ತೆರವು ಮಾಡಿತ್ತು. ಇದನ್ನು ಪ್ರಶ್ನಿಸಿ ರೆಸಾರ್ಟ್ ಗಳ ಮಾಲಿಕರು ಸುಪ್ರೀಂ ಮೊರೆ ಹೋಗಿದ್ದರು.
ಕಳೆದ ನಾಲ್ಕು ವರ್ಷದಿಂದ ನ್ಯಾಯಾಲಯದಲ್ಲಿದ್ದ ವ್ಯಾಜ್ಯ ಇದೀಗ ಇತ್ಯರ್ಥ ವಾಗಿದ್ದು ಜಿಲ್ಲಾಡಳಿತಕ್ಕೆ ಸ್ಪಷ್ಟ ತೆರವು ಕಾರ್ಯಚರಣೆ ನಡೆಸುವಂತೆ ಸೂಚನೆ ನೀಡಿದೆ. ಒಂದು ತಿಂಗಳ ಕಾಲವಕಾಶ ನೀಡಿದ್ದು ಮಾಲೀಕರು ಸ್ವಯಂ ಪ್ರೇರಣೆಯಿಂದ ತೆರವು ಮಾಡಿಕೊಳ್ಳಬೇಕು, ಇಲ್ಲವಾದಲ್ಲಿ ಜಿಲ್ಲಾಡಳಿತ ತೆರವು ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ನ ತ್ರಿಸದಸ್ಯದ ಮೊಹನ್ ಶಾರ್ದೂಲ, ಸುರೇಶ ರೆಡ್ಡಿ ಅವರನ್ನೊಳಗೊಂಡ ಪೀಠ ನೀಡಿದ್ದ ಅದೇಶದಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.
ಕಳೆದ ಹಲವು ವರ್ಷದಿಂದ ವಿದೇಶಿಗರ ತಾಣದಲ್ಲಿ ಅಕ್ರಮ ಚಟುವಟಿಕೆ, ಮಾದಕ ದ್ರವ್ಯಗಳ ಸರಬರಾಜು, ಅರಣ್ಯ ಒತ್ತುವರಿ, ಹಂಪಿ ಅಭಿವೃದ್ಧಿ ಪ್ರಾಧಿಕಾರದ ನಿಯಮ ಉಲ್ಲಂಘನೆಯಂತ ಹತ್ತಾರು ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾದಗಲೊಮ್ಮೆ ರೆಸಾರ್ಟ್ ಮಾಲೀಕರು ಕೋರ್ಟ್ ಮೊರೆ ಹೋಗುತ್ತಿದ್ದರು. ಇದು ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿತ್ತು. ಇದೀಗ ಜಿಲ್ಲಾಡಳಿತ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.
ವರದಿ: ಎಂ.ಜೆ. ಶ್ರೀನಿವಾಸ್