ರಾಜ್ಯ

ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ನೀತಿ ಜಾರಿ: ಬಸವರಾಜ ಬೊಮ್ಮಾಯಿ

Shilpa D

ಗದಗ: ಕನ್ನಡಿಗರಿಗೆ ಉದ್ಯೋಗ ಕಲ್ಪಿಸಲು ಶಿಫಾರಸು ಮಾಡಿರುವ ಡಾ.ಸರೋಜಿನಿ ಮಹಿಷಿ ವರದಿ ಅನುಷ್ಠಾನದ ಬಗ್ಗೆ ತಾತ್ವಿಕವಾಗಿ ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ವರದಿಯ ಶಿಫಾರಸ್ಸುಗಳನ್ನು ಜಾರಿ ಮಾಡುವ ಬಗ್ಗೆ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಗಂಭೀರ ಚಿಂತನೆ ನಡೆದಿದೆ ಎಂದು ಗೃಹ‌ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ವರದಿಯ ಎಲ್ಲಾ ಶಿಫಾರಸುಗಳನ್ನು ಸಂಪೂರ್ಣವಾಗಿ ಅನುಷ್ಠಾನ ಮಾಡುವ ಪ್ರಯತ್ನ ನಡೆಯುತ್ತಿವೆ. ಆದರೆ ಕೆಲವೊಂದು ತೊಡಕುಗಳಿದ್ದು, ಅವುಗಳನ್ನು ನಿವಾರಿಸುವ ಪ್ರಯತ್ನ ಕೂಡ ನಡೆಯುತ್ತಿದೆ.

ಈಗಾಗಲೇ ಈ ಬಗ್ಗೆ ಸಚಿವ ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ವರದಿಯ ಎಲ್ಲಾ ಪ್ರಮುಖ ಅಂಶಗಳನ್ನು ಜಾರಿ ಮಾಡಿ ಕನ್ನಡಿಗರಿಗೆ ಉದ್ಯೋಗ ಕೊಡುವ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಆಶ್ವಾಸನೆ ನೀಡಿದರು.

ಮಹಾದಾಯಿ ವಿಚಾರ‌ ಒಂದು ನ್ಯಾಯಮಂಡಳಿ ಮುಂದೆ ಹಾಗೂ ಮತ್ತೊಂದು ಸುಪ್ರಿಂ ಕೋರ್ಟ್‌ ಮುಂದಿದೆ. ಇದುವರೆಗೂ ಹಿಂದಿನ ಸರ್ಕಾರ ನಮ್ಮ ಅರ್ಜಿಗಳಿಗೆ ಕೇಂದ್ರ ಸರಕಾರವನ್ನು ಪಾರ್ಟಿಯನ್ನಾಗಿ ಮಾಡಿರಲಿಲ್ಲ. 

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೇಂದ್ರ ಸರಕಾರವನ್ನು ಪಾರ್ಟಿದಾರರನ್ನಾಗಿ ಮಾಡಿದೆ. ಈ ಮೂಲಕ ಹೇಳಿಕೆ ನೀಡಲು ಕೇಂದ್ರ ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದೆ.ಇದೇ ಫೆಬ್ರುವರಿ ತಿಂಗಳಲ್ಲಿ ವಿಚಾರಣೆ ನಡೆಯಲಿದ್ದು, ಕಾನೂನಾತ್ಮಕವಾದ ಎಲ್ಲ ಹೋರಾಟಗಳನ್ನು ಮಾಡಲು ನಾವು ಸಿದ್ಧರಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

SCROLL FOR NEXT