ರಾಜ್ಯ

ಏನಿದು ಸರೋಜಿನಿ ಮಹಿಷಿ ವರದಿ? ಅದರಲ್ಲಿ ಮಾಡಿರುವ ಶಿಫಾರಸುಗಳೇನು?

Sumana Upadhyaya

ಬೆಂಗಳೂರು: ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಗುರುವಾರ ಕರ್ನಾಟಕ ಬಂದ್ ನಡೆಸುತ್ತಿವೆ. ಈ ಸಂದರ್ಭದಲ್ಲಿ ಸರೋಜಿನಿ ಮಹಿಷಿ ವರದಿ ಮತ್ತೆ ಚರ್ಚೆಗೆ ಬಂದಿದೆ.ಅಷ್ಟಕ್ಕೂ ಏನಿದು ಸರೋಜಿನಿ ಮಹಿಷಿ ವರದಿ, ತಿಳಿದುಕೊಳ್ಳೋಣ ಬನ್ನಿ:


ಸರೋಜಿನಿ ಮಹಿಷಿ ವರದಿ ದಶಕಗಳಷ್ಟು ಹಳೆಯದ್ದು. ರಾಜ್ಯದ ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ತಯಾರಿಸಲಾದ ವರದಿಯಿದು. ಕರ್ನಾಟಕದ ಸಾರ್ವಜನಿಕ ವಲಯ ಸಂಸ್ಥೆಗಳು, ಖಾಸಗಿ ಮತ್ತು ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗಗಳಲ್ಲಿ ನಿರ್ದಿಷ್ಟ ಶೇಕಡಾವಾರು ಮೀಸಲಾತಿಯನ್ನು ಕನ್ನಡಿಗರಿಗೆ ಮಾತ್ರ ನೀಡಬೇಕೆಂದು ಸರೋಜಿನಿ ಮಹಿಷಿ ಸಮಿತಿ ಶಿಫಾರಸು ಮಾಡಿದೆ. 


ಕೇಂದ್ರದ ಮಾಜಿ ಸಚಿವೆ ಸರೋಜಿನಿ ಮಹಿಷಿ ನೇತೃತ್ವದ ಸಮಿತಿ 1984ರಲ್ಲಿ ತನ್ನ ವರದಿಯನ್ನು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿತ್ತು. ಈ ಸಮಿತಿಯಲ್ಲಿ ಕವಿ ಗೋಪಾಲಕೃಷ್ಣ ಅಡಿಗ, ಜಿ ಕೆ ಸತ್ಯ, ಕೆ ಪ್ರಭಾಕರ ರೆಡ್ಡಿ, ಜಿ ನಾರಾಯಣ ಕುಮಾರ್, ನಿವೃತ್ತ ಐಎಎಸ್ ಅಧಿಕಾರಿ ಮತ್ತು ಮಾಜಿ ಶಾಸಕ ಬಿ ಎಸ್ ಹನುಮಾನ್ ಮತ್ತು ಸಿದ್ದಯ್ಯ ಪುರಾಣಿಕ್ ಇದ್ದರು.


ಸರೋಜಿನಿ ಮಹಿಷಿ ವರದಿಯ ಪ್ರಮುಖ ಶಿಫಾರಸುಗಳು:
-ಕರ್ನಾಟಕದಲ್ಲಿ ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕೆಂದು ಶಿಫಾರಸು ಮಾಡಿದ್ದ ಸರೋಜಿನಿ ಮಹಿಷಿ ವರದಿ 58 ಶಿಫಾರಸುಗಳನ್ನು ಸರ್ಕಾರದ ಮುಂದಿಟ್ಟಿತು.
-ಕರ್ನಾಟಕದಲ್ಲಿರುವ ಎಲ್ಲಾ ಸಾರ್ವಜನಿಕ ವಲಯ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಶೇಕಡಾ 100ರಷ್ಟು ಮೀಸಲಾತಿ.
-ಕೇಂದ್ರ ಸರ್ಕಾರಿ ಇಲಾಖೆಗಳು ಮತ್ತು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ವಲಯ ಘಟಕಗಳ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಯನ್ನು ಕೇವಲ ಕನ್ನಡಿಗರಿಗೆ ಮಾತ್ರ ನೀಡಬೇಕು.
-ಕರ್ನಾಟಕದಲ್ಲಿ ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಮತ್ತು ಸಾರ್ವಜನಿಕ ವಲಯ ಘಟಕಗಳಲ್ಲಿ ಗ್ರೂಪ್ ಬಿ ಮತ್ತು ಗ್ರೂಪ್ ಎ ಹುದ್ದೆಗಳಲ್ಲಿ ಕ್ರಮವಾಗಿ ಶೇಕಡಾ 80ರಷ್ಟು ಮತ್ತು ಶೇಕಡಾ 65ರಷ್ಟು ಕನ್ನಡಿಗರಿಗೆ ಮೀಸಲು ಇಡಬೇಕು.
-ರಾಜ್ಯದ ಕೈಗಾರಿಕಾ ಘಟಕಗಳಲ್ಲಿ ಖಾಸಗಿ ಅಧಿಕಾರಿ ಹುದ್ದೆಗಳನ್ನು ಕನ್ನಡಿಗರಿಗೇ ಕೊಡಬೇಕು.
-ಕೈಗಾರಿಕೆಗಳಲ್ಲಿ ಸ್ಥಳೀಯ ಜನರಿಗೆ ಪ್ರಾಧಾನ್ಯತೆ ಕೊಡಬೇಕು.


ಸರೋಜಿನಿ ಬಿಂದುರಾವ್ ಮಹಿಷಿ ಯಾರು?
ಮಹಿಷಿ ಸಮಿತಿಯ ಮುಖ್ಯಸ್ಥೆ ಸರೋಜಿನಿ ಬಿಂದುರಾವ್ ಮಹಿಷಿ ಅವರನ್ನು ನೇಮಿಸಿದ್ದೇ ಕರ್ನಾಟಕ ಸರ್ಕಾರ. ಕರ್ನಾಟಕದ ಮೊದಲ ಮಹಿಳಾ ಸಂಸದೆ ಎಂಬ ಹೆಗ್ಗಳಿಕೆ ಇವರದ್ದು. ಧಾರವಾಡ ಉತ್ತರ ಕ್ಷೇತ್ರವನ್ನು 1962ರಿಂದ 1980ರ ಅವಧಿಯಲ್ಲಿ ನಾಲ್ಕು ಬಾರಿ ಪ್ರತಿನಿಧಿಸಿದ್ದರು. ಜನತಾ ಪಕ್ಷದಿಂದ ರಾಜ್ಯಸಭೆಗೆ ಕೂಡ ಆಯ್ಕೆಯಾಗಿದ್ದರು.

SCROLL FOR NEXT