ರಾಜ್ಯ

ದೇಶದ ಪ್ರತಿ ಕುಟುಂಬಕ್ಕೂ 2022ರ ವೇಳೆಗೆ ಸೂರು: ಸುರೇಶ್ ಅಂಗಡಿ

Lingaraj Badiger

ಬೆಳಗಾವಿ: ದೇಶದ ಪ್ರತಿ ಕುಟುಂಬಕ್ಕೂ 2022ರ ವೇಳೆಗೆ ಸೂರು ಒದಗಿಸಲಾಗುವುದು ಎಂದು ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಶನಿವಾರ ಹೇಳಿದ್ದಾರೆ.

ಇಂದು ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ನಡೆದ 2019-20ನೇ ಸಾಲಿನ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ)ಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಲ್ಲರಿಗೂ ಮನೆ ಹೊಂದಬೇಕು ಎಂಬ ಆಸೆ ಇರುತ್ತದೆ. ಇದನ್ನು ಸಾಕಾರಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. 2022ರ ವೇಳೆಗೆ ಎಲ್ಲರಿಗೂ ಸೂರು ಒದಗಿಸಬೇಕು ಎಂಬುದು ಪ್ರಧಾನಮಂತ್ರಿಗಳ ಕನಸಾಗಿದೆ. ಆದ್ದರಿಂದ ಎಲ್ಲರಿಗೂ ಸೂರು ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.

ಬೆಳಗಾವಿ ಜಿಲ್ಲೆಯಲ್ಲಿ ವಸತಿ ಹಾಗೂ ಕುಡಿಯುವ ನೀರು ಯೋಜನೆ ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ಸಮಗ್ರ ಯೋಜನೆಯೊಂದನ್ನು ಮಾರ್ಚ 31 ರೊಳಗೆ ರೂಪಿಸಬೇಕು ಎಂದು ತಿಳಿಸಿದರು.

ನಗರ ವಸತಿ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ 16660 ಮನೆಗಳು ಅನುಮೋದನೆಗೊಂಡಿದ್ದು, 2624ಮನೆಗಳು ಪ್ರಗತಿ ಹಂತದಲ್ಲಿವೆ. ಮಾರ್ಚ್ ಅಂತ್ಯಕ್ಕೆ ಶೇ.100 ಗುರಿ ಸಾಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಪರಿಶಿಷ್ಟ ಜಾತಿ ಪಂಗಡದವರಿಗೆ 3.50 ಲಕ್ಷ  ಹಾಗೂ ಸಾಮಾನ್ಯ ವರ್ಗದವರಿಗೆ ಮನೆ ನಿರ್ಮಿಸಿಕೊಡಲು 2.70ಲಕ್ಷ ನೆರವು ನೀಡಲಾಗುತ್ತದೆ ಎಂದು ವಿವರಿಸಿದರು.

ನಗರ ವಸತಿ ಯೋಜನೆ ಅನುಷ್ಠಾನ ಚುರುಕುಗೊಳಿಸಲು ಪ್ರತ್ಯೇಕ ಕಚೇರಿಯೊಂದನ್ನು ತೆರೆಯುವಂತೆ ಸಲಹೆ ನೀಡಿದರು. ಬೆಳಗಾವಿಯಲ್ಲಿ ನಿವೇಶನ ಹೊಂದಿಲ್ಲದೇ ಇರುವ 19656 ಜನರು ಮನೆಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ. ಇದರಲ್ಲಿ 1808 ಜನರ ಅರ್ಜಿ ಪರಿಶೀಲಿಸಿ ಅನುಮೋದಿಸಲಾಗಿದೆ ಎಂದರು.

ಬೆಳಗಾವಿ ಜಿಲ್ಲೆಯಲ್ಲಿ 16 ಸಾವಿರ ಜನರು ಅರ್ಜಿಗಳನ್ನು ಸಲ್ಲಿಸಿದ್ದು, ಈಗಾಗಲೇ ಇವುಗಳನ್ನು ಪರಿಶೀಲಿಸಿ ಮೂರು ಸಮಗ್ರ ಯೋಜನೆಗಳನ್ನು ಅನುಮೋದನೆಗಾಗಿ ಕಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಮಾಹಿತಿ ನೀಡಿದರು.

SCROLL FOR NEXT