ರಾಜ್ಯ

ವಿಧಾನಸಭೆ ಅಧಿವೇಶನದಲ್ಲಿ ಬೀದರ್ ಶಾಲೆ ವಿಚಾರ ಪ್ರಸ್ತಾಪ- ಸಿದ್ದರಾಮಯ್ಯ 

Nagaraja AB

ಬೀದರ್: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಾಟಕ ಪ್ರದರ್ಶನ ಮಾಡಿದ್ದಕ್ಕೆ ಬೀದರ್ ನ ಶಾಲೆಯೊಂದರ ಅಮಾಯಕ ಇಬ್ಬರು ಮಹಿಳೆಯರ ಮೇಲೆ ಪೊಲೀಸರು ದೇಶ ದ್ರೋಹ ಪ್ರಕರಣ ದಾಖಲಿಸಿರುವ ವಿಚಾರವನ್ನು ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಜನವರಿ 21 ರಂದು ಪ್ರಾಥಮಿಕ ಶಾಲೆಯಲ್ಲಿ ನಾಟಕ ಪ್ರದರ್ಶನ ಮಾಡಿದ್ದಕ್ಕೆ ಶಾಹೀನ್ ಶಾಲೆಯ ಐದನೇ ತರಗತಿ ಬಾಲಕಿಯ ತಾಯಿ ಹಾಗೂ ಶಾಲೆಯ ಮುಖ್ಯೋಪಾಧ್ಯಾಯಿನಿಯನ್ನು ಬಂಧಿಸಲಾಗಿದ್ದು, ನಂತರ ಜಾಮೀನಿನ ಮೇರೆಗೆ ಶುಕ್ರವಾರ ಬಿಡುಗಡೆ ಮಾಡಲಾಗಿದೆ.

ಜನರ ಧ್ವನಿಯನ್ನು ಅಡಗಿಸುತ್ತಿರುವ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಶಾಲಾ ಆಡಳಿತ ಮಂಡಳಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿರುವ ಹಿಂದೆ ರಾಜ್ಯ ಸರ್ಕಾರದ ಕೈವಾಡವಿದೆ ಎಂದು ಆರೋಪಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿರುದ್ಧದ ಧ್ವನಿಯನ್ನು ಅಡಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಟೀಕಿಸಿದರು.

ನಾಟಕ ಪ್ರದರ್ಶನದ ವೇಳೆಯಲ್ಲಿ ಎನ್ ಆರ್ ಸಿ ಗಾಗಿ ಯಾರಾದರೂ ದಾಖಲೆ ಕೇಳಿದರೆ ಚಪ್ಪಲಿಯಿಂದ ಹೊಡೆಯುವುದಾಗಿ 11 ವರ್ಷದ ಬಾಲಕಿ ಹೇಳಿಕೆ ನೀಡಿದ್ದರು. ಇದು ಸಾಮಾನ್ಯವಾಗಿ ಹೇಳುವಂತಹ ಹೇಳಿಕೆ. ಬಾಲಕಿ ನಾಟಕದಲ್ಲಿನ ಪಾತ್ರ ಮಾಡಿದರಷ್ಟೇ. ಇದು ದೇಶದ್ರೋವಾಗಲ್ಲ, ಪೊಲೀಸರು ಐಪಿಸಿ ಸೆಕ್ಷನ್ 124(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದು 1860ರಲ್ಲಿ ಬ್ರಿಟಿಷರು ಜಾರಿಗೆ ತಂದಿರುವ ಕಾನೂನು ಆಗಿದ್ದು, ಈ ಕಾನೂನು ಪ್ರಸ್ತುತವಾಗಿಲ್ಲ, ಇದನ್ನು ಐಪಿಸಿ ಪರಾಮರ್ಶೆ ಮಾಡಬೇಕೆಂದು ಅವರು ಹೇಳಿದರು.

ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ನಡೆಸುತ್ತಿರುವ ಶಾಲೆಯ ಬಗ್ಗೆ ಸರ್ಕಾರ ಏಕೆ ದೇಶದ್ರೋಹ ಪ್ರಕರಣ ದಾಖಲಿಸಿಲ್ಲ ಎಂದು ಪ್ರಶ್ನಿಸಿದ ಅವರು, ಬಾಬ್ರಿ ಮಸೀದಿ ಧ್ವಂಸ ಕುರಿತು ಶಾಲಾ ಮಕ್ಕಳು ಪ್ರದರ್ಶಿಸಿದ ನಾಟಕ ಕೂಡಾ ಅಕ್ರಮ. ಆದರೆ, ಪೊಲೀಸರು ಏಕೆ ಪ್ರಕರಣ ದಾಖಲಿಸಲಿಲ್ಲ. ಇದು  ಅನ್ಯಾಯ ಎಂದರು.

SCROLL FOR NEXT