ರಾಜ್ಯ

ವಿಸರ್ಜನೆಯಾಗದ ಹುತಾತ್ಮ ಯೋಧ ಗುರುವಿನ ಚಿತಾಭಸ್ಮ: ಮುಖ್ಯಮಂತ್ರಿಗೆ ಪತ್ರ ಬರೆದ ಎಸ್.ಎಂ. ಕೃಷ್ಣ

Raghavendra Adiga

ಬೆಂಗಳೂರು: ಕಾಶ್ಮೀರದ ಫುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಮಂಡ್ಯ ಜಿಲ್ಲೆ, ಮದ್ದೂರು ತಾಲೂಕಿನ ಹೆಚ್. ಗುರು ಎಂಬ ವೀರ ಯೋಧ ಹುತಾತ್ಮರಾಗಿದ್ದು, ಒಂದು ವರ್ಷ ಕಳೆದರೂ ಸದರಿ ಯೋಧರ ಚಿತಾಭಸ್ಮವನ್ನು ವಿಸರ್ಜಿಸದೆ, ಅವರ ಸ್ಮಾರಕವನ್ನೂ ನಿರ್ಮಿಸದೆ ನಿರ್ಲಕ್ಷ್ಯ ವಹಿಸಿರುವುದು ಅತ್ಯಂತ ದುರದೃಷ್ಟಕರ ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಬೇಸರ ವ್ಯಕ್ತಪಡಿಸಿದ್ದಾರೆ.

ಫುಲ್ವಾಮಾದ ದಾಳಿ ಅತ್ಯಂತ ಘೋರ ಕೃತ್ಯವಾಗಿದ್ದು, ಇಡೀ ರಾಷ್ಟ್ರ ಸದರಿ ದಾಳಿಯ ಬಗ್ಗೆ ಕಂಬನಿ ಮಿಡಿದಿತ್ತು. ಇಂತಹ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಕರ್ನಾಟಕದ ಯೋಧನ ಸ್ಮಾರಕ ನಿರ್ಮಾಣದ ಬಗ್ಗೆ ಯಾವುದೇ ಕ್ರಮ ವಹಿಸದೆ ಆಡಳಿತ ವರ್ಗ ನಿರ್ಲಕ್ಷ್ಯ ವಹಿಸಿರುವುದು ಅತ್ಯಂತ ಖಂಡನೀಯ. ಯೋಧನ ಬಲಿದಾನ ಮುಂದಿನ ಪೀಳಿಗೆಗೆ ಆದರ್ಶವಾಗಬೇಕಿದ್ದು, ಅದನ್ನು ಕಾರ್ಯರೂಪಕ್ಕೆ ಇಳಿಸಬೇಕಾದ ಜಿಲ್ಲಾಡಳಿತ ಮತ್ತು ಸರ್ಕಾರ ಕ್ರಮ ವಹಿಸದೆ ನಿರ್ಲಕ್ಷಿಸಿರುವುದು ಸಾರ್ವಜನಿಕರ ಅವಕೃಪೆಗೆ ಒಳಗಾಗಿದೆ ಎಂದು ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರದಲ್ಲಿ ತಿಳಿಸಿದ್ದಾರೆ.

ಯಾವುದೇ ಆಡಳಿತ ಸರ್ಕಾರ ಇಂತಹ ವಿಷಯಗಳ ಬಗ್ಗೆ ತುರ್ತು ಗಮನ ವಹಿಸುವುದು ಅವಶ್ಯವಿದ್ದು, ನಾನು ಮುಖ್ಯಮಂತ್ರಿಯಾಗಿದ್ದಾಗ ಸ್ಥಾಪನೆಗೊಂಡ ಕಾವೇರಿ ನೀರಾವರಿ ನಿಗಮದ ಮೂಲಕ ತುರ್ತಾಗಿ ಈ ವೀರ ಯೋಧನ ಸ್ಮಾರಕ ನಿರ್ಮಾಣಕ್ಕೆ ಕ್ರಮ ವಹಿಸಿ ಅದರ ನಿರ್ವಹಣೆಯನ್ನೂ ಕಾವೇರಿ ನೀರಾವರಿ ನಿಗಮದ ಮೂಲಕ ನಿರ್ವಹಿಸಿ ಯೋಧನ ಬಲಿದಾನವನ್ನು ನೆನೆಯುವಂತಹ ಕಾರ್ಯ ತಮ್ಮಿಂದ ಆಗಲಿ ಎಂದು ಆಶಿಸುತ್ತೇನೆ ಎಂದು ಬಿಜೆಪಿ ಮುಖಂಡರೂ ಆಗಿರುವ ಕೃಷ್ಣ ತಿಳಿಸಿದ್ದಾರೆ.

ಈ ಕೂಡಲೇ ಮಂಡ್ಯ ಜಿಲ್ಲಾಡಳಿತ ಒಂದು ವರ್ಷವಾದರೂ ವಿಸರ್ಜನೆಯಾಗದೆ ನಿರ್ಲಕ್ಷ್ಯಕ್ಕೊಳಗಾಗಿರುವ ವೀರ ಯೋಧ ಗುರುವಿನ ಚಿತಾಭಸ್ಮವನ್ನು ಯಾವ ಕಾರಣಕ್ಕೆ ವಿಸರ್ಜಿಸಿಲ್ಲ ಎಂಬುದನ್ನು ಪತ್ತೆ ಹಚ್ಚಿ ಅದಕ್ಕೆ ಶಾಸ್ತ್ರಕ್ತೋಕ್ತವಾಗಿ ವಿಸರ್ಜನಾ ಕಾರ್ಯವನ್ನು ಕೈಗೊಳ್ಳಲು ತಾವು ಸೂಕ್ತ ನಿರ್ದೇಶನ ನೀಡಬೇಕು. ಈ ಬಗ್ಗೆ ತಾವು ತಕ್ಷಣ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಿ ವೀರ ಯೋಧನ ಆತ್ಮಕ್ಕೆ ಶಾಂತಿ ಮತ್ತು ಅವರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಪತ್ರದಲ್ಲಿ ಎಸ್.ಎಂ.ಕೃಷ್ಣ ತಿಳಿಸಿದ್ದಾರೆ.

SCROLL FOR NEXT