ರಾಜ್ಯ

ಅನುದಾನ ಸದುಪಯೋಗಪಡಿಸಿಕೊಳ್ಳದ ನಿಗಮಗಳಿಂದ ಕೋಟ್ಯಂತರ ರೂ. ನಷ್ಟ; ಸಿಎಜಿ ವರದಿ

Lingaraj Badiger

ಬೆಂಗಳೂರು: ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದ್ದ ಅನುದಾನವನ್ನು ವಿವಿಧ ಇಲಾಖೆಗಳು ಸದುಪಯೋಗಪಡಿಸಿಕೊಳ್ಳದೆ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ. 

ಇಂದು ವಿಧಾನಸಭೆಯಲ್ಲಿ ಮಂಡನೆಯಾದ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ಸಾರ್ವಜನಿಕ ವಲಯ ಉದ್ಯಮಗಳ(ಸಿಎಜಿ) ಮೇಲಿನ ವರದಿಯಲ್ಲಿ ಈ ವಿಷಯ ಬಹಿರಂಗಗೊಂಡಿದೆ. 

ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಪರಿಸರ ಕಾನೂನುಗಳನ್ನು ಉಲ್ಲಂಘಿಸಿ ಅತಿ ಸೂಕ್ಷ್ಮವಾದ  ಪ್ರದೇಶದಲ್ಲಿ 6.92 ಕೋಟಿ ರೂ. ವೆಚ್ಚದಲ್ಲಿ ಒಂದು ಬಸ್ ಡಿಪೋ ನಿರ್ಮಿಸಿದೆ ಎಂದು ವರದಿ ಉಲ್ಲೇಖಿಸಿದೆ. 

ಮೈಸೂರು ಕಾಗದ ಕಾರ್ಖಾನೆ ನಿಯಮಿತ, ಕಚ್ಚಾ ಸಾಮಾಗ್ರಿಗಳಾದ ಪಲ್ಸ್ ಮರಗಳನ್ನು ಸರ್ಮಥವಾಗಿ ವಿಲೇವಾರಿ ಮಾಡುವಲ್ಲಿ ವಿಫಲವಾಗಿದ್ದರಿಂದ 4.74 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸಿದೆ ಎಂದು ವರದಿ ತಿಳಿಸಿದೆ. 

ಅರಣ್ಯ, ವಸತಿ ಮತ್ತು ವಿಹಾರ ಧಾಮಗಳ ನಿಯಮಿತ, ಸರ್ಕಾರದಿಂದ ದೊರೆತಿದ್ದ 11.90 ಕೋಟಿ ರೂ. ಅನುದಾನವನ್ನು ಸೂಕ್ತವಾಗಿ ಬಳಸಿಕೊಳ್ಳದ್ದರಿಂದ ಉದ್ದೇಶಿಸಿದ್ದ ಯಾವುದೇ ಯೋಜನೆಗಳು ಈಡೇರಲಿಲ್ಲ. 

ಮೈಸೂರು ಮಾರಾಟ ಅಂತಾರಾಷ್ಟ್ರೀಯ ಲಿ. ಆದಾಯ ಅಂದಾಜು ಮಾಡುವಲ್ಲಿ ಅನುಸರಿಸಿದ ಮಾರ್ಗದಿಂದ 1.19 ಕೋಟಿ ರೂ. ದಂಡದ ಬಡ್ಡಿ ಪಾವತಿಸುವ ಅನಿವಾರ್ಯತೆಗೆ ಸಿಲುಕಿತು.  ಜೊತೆಗೆ,  ಪೂರ್ವಾಪರ ವಿಚಾರಿಸದೆ ಭೋಗ್ಯದ ಕರಾರನ್ನು ರದ್ದುಗೊಳಿಸಿದ್ದರಿಂದ 5.73 ಕೋಟಿ ರೂ. ನಷ್ಟ ಅನುಭವಿಸಿತು ಎಂದು ವರದಿ ಉಲ್ಲೇಖಿಸಿದೆ. 

ತನ್ನ ಪ್ರಧಾನ ಕಚೇರಿ ನಿರ್ಮಾಣಕ್ಕೆ ಅವೈಜ್ಞಾನಿಕವಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದರಿಂದ ಕರ್ನಾಟಕ ರಾಜ್ಯ ಖನಿಜಗಳ ನಿಗಮ ನಿಯಮಿತ 16.32 ಕೋಟಿ ರೂ. ನಷ್ಟ ಅನುಭವಿಸಿತು ಎಂದು ವರದಿ ತಿಳಿಸಿದೆ.

SCROLL FOR NEXT