ರಾಜ್ಯ

19ನೇ ಪ್ರಕರಣದಲ್ಲಿ ಸೈನೈಡ್‌ ಮೋಹನ್‌ಗೆ ಜೀವಾವಧಿ ಶಿಕ್ಷೆ

Shilpa D

ಮಂಗಳೂರು: ಕುಖ್ಯಾತ ಸರಣಿ ಸ್ತ್ರೀ ಹಂತಕ ಸೈನೈಡ್‌ ಮೋಹನ್‌ ಕುಮಾರ್‌ಗೆ 19ನೇ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಕಾಸರಗೋಡಿನ ಬದಿಯಡ್ಕ ಕೊಳ್ತಾಜೆಪಾದೆ ಗ್ರಾಮದ ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿ ಮೈಸೂರಿಗೆ ಕರೆದೊಯ್ದು ಅತ್ಯಾಚಾರ ಎಸಗಿ ಬಳಿಕ ಸೈನೈಡ್‌ ಮಾತ್ರೆ ನೀಡಿ ಕೊಲೆ ಮಾಡಿದ ಆರೋಪ ಫೆ.11ರಂದು ನ್ಯಾಯಾಲಯದಲ್ಲಿ ಸಾಬೀತಾಗಿತ್ತು. 

ಒಟ್ಟು 20 ಯುವತಿಯರನ್ನು ಮದುವೆ ಆಗುವುದಾಗಿ ನಂಬಿಸಿ, ಅವರ ಮೇಲೆ ಅತ್ಯಾಚಾರ ಎಸಗಿದ ಬಳಿಕ ಸೈನೈಡ್‌ ನೀಡಿ ಕೊಲೆ ಮಾಡಿದ ಆರೋಪ ಮೋಹನ್‌ ಮೇಲಿದೆ. ಈ ಪೈಕಿ 19 ಪ್ರಕರಣಗಳ ವಿಚಾರಣೆ ಮುಗಿದು, ನ್ಯಾಯಾಲಯದ ತೀರ್ಮಾನ ಪ್ರಕಟವಾಗಿದೆ. ಇದು ಸೈನೈಡ್‌ ಮೋಹನ್‌ ಜೀವಾವಧಿ ಶಿಕ್ಷೆಗೊಳಗಾಗಿರುವ 15ನೇ ಪ್ರಕರಣ. ನಾಲ್ಕು ಪ್ರಕರಣಗಳಲ್ಲಿ ಮರಣದಂಡನೆ ವಿಧಿಸಲಾಗಿದೆ

ಕೊಲೆ, ಅಪಹರಣ, ಅತ್ಯಾಚಾರ, ಕೊಲೆಯ ಉದ್ದೇಶದಿಂದ ವಿಷಪ್ರಾಶನ, ಚಿನ್ನಾಭರಣ ಸುಲಿಗೆ, ವಂಚನೆ ಹಾಗೂ ಸಾಕ್ಷ್ಯನಾಶ ಮಾಡಿದ ಅಪರಾಧಗಳಿಗಾಗಿ ಮೋಹನ್‌ಗೆ ವಿವಿಧ ಪ್ರಮಾಣದ ಶಿಕ್ಷೆಗಳನ್ನು ವಿಧಿಸಲಾಗಿದೆ.

ಬೀಡಿ ಕಟ್ಟುತ್ತಿದ್ದ ಮೃತ ಯುವತಿ 2006ರಲ್ಲಿ ಸಂಬಂಧಿಯೊಬ್ಬರ ಮದುವೆಗೆ ಹೋಗಿದ್ದಾಗ ಮೋಹನ್‌ ಪರಿಚಯವಾಗಿತ್ತು. ಶಿಕ್ಷಕ ಎಂದು ಪರಿಚಯಿಸಿಕೊಂಡಿದ್ದ ಅಪರಾಧಿ, ಯುವತಿಯನ್ನು ಮದುವೆ ಆಗುವುದಾಗಿ ಆಮಿಷವೊಡ್ಡಿದ್ದ.

ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುವ ನೆಪದಲ್ಲಿ 2006ರ ಜೂನ್‌ 3ರಂದು ಯುವತಿಯನ್ನು ಪುತ್ತೂರಿಗೆ ಕರೆಸಿಕೊಂಡಿದ್ದ. ಅಲ್ಲಿಂದ ಮೈಸೂರಿಗೆ ಹೋಗಿ ಆಕೆಯೊಂದಿಗೆ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದ. ಅಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆಸಿದ್ದ. ಮರುದಿನ ಬೆಳಿಗ್ಗೆ ಮೈಸೂರಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಕರೆದೊಯ್ದು ಗರ್ಭಪಾತದ ಮಾತ್ರೆ ಎಂದು ನಂಬಿಸಿ ಸೈನೈಡ್‌ ನೀಡಿದ್ದ.

ಸೈನೈಡ್‌ ಸೇವಿಸಿದ್ದ ಯುವತಿ ಕುಸಿದು ಬಿದ್ದಿದ್ದಳು. ಅದನ್ನು ಕಂಡ ಬಸವರಾಜ್‌ ಎಂಬ ಪೊಲೀಸ್‌ ಸಿಬ್ಬಂದಿ ಆಸ್ಪತ್ರೆಗೆ ಸಾಗಿಸಿದ್ದರು. ಅಷ್ಟರಲ್ಲಾಗಲೇ ಯುವತಿ ಮೃತಪಟ್ಟಿದ್ದಳು. 2009ರಲ್ಲಿ ಮೋಹನ್‌ ಬಂಧನದ ಬಳಿಕ ಕೊಳ್ತಾಜೆಪಾದೆಯ ಯುವತಿಯ ಕೊಲೆ ಪ್ರಕರಣವೂ ಬಯಲಿಗೆ ಬಂದಿತ್ತು.

SCROLL FOR NEXT