ರಾಜ್ಯ

ಬೆಳಗಾವಿ: ಕೇಕ್ ಕಟ್ ಮಾಡಿ ತಮ್ಮ ಲಕ್ಕಿ ಎತ್ತಿನ ಹುಟ್ಟುಹಬ್ಬ ಆಚರಿಸಿದ ರೈತರು!

Lingaraj Badiger

ಬೆಳಗಾವಿ: ಮಾನವರ ಜನ್ಮದಿನಾಚರಣೆ ಆಚರಿಸುವುದು ಸಾಮಾನ್ಯ. ಕೆಲವು ಜನ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಬೆಕ್ಕು ಹಾಗೂ ನಾಯಿಯಂತಹ ತಮ್ಮ ಇಷ್ಟದ ಸಾಕು ಪ್ರಾಣಿಗಳ ಹುಟ್ಟು ಹಬ್ಬ ಆಚರಿಸುತ್ತಾರೆ. ಆದರೆ ಬೆಳಗಾವಿಯ ಕೆಲ ಯುವ ರೈತರು ತಮ್ಮ ಲಕ್ಕಿ ಎತ್ತಿನ ನಾಲ್ಕನೆ ಹುಟ್ಟು ಹಬ್ಬವನ್ನು ಆಚರಿಸಿ ಅಚ್ಚರಿ ಮೂಡಿಸಿದ್ದಾರೆ.

ಹೌದು, ಬೆಳಗಾವಿ ತಾಲೂಕಿನ ಕಾಡೊಳ್ಳಿ ಗ್ರಾಮದ ಸುನಿಲ್ ದೇಸಾಯಿ ಅವರ 'ರಾಜ' ಎಂಬ ಹೆಸರಿನ ಲಕ್ಕಿ ಎತ್ತು, ಎತ್ತಿನ ಗಾಡಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ಗೆದ್ದಿದೆ. ಹೀಗಾಗಿ ಈ ಯುವ ರೈತರಿಗೆ ಅದು ಸ್ನೇಹಿತನಾಗಿದೆ ಮತ್ತು ಲಕ್ಕಿ ಬುಲ್ ಎಂದು ಗುರುತಿಸಿಕೊಂಡಿದೆ.

ಕಳೆದ ಬುಧವಾರ ರಾತ್ರಿ ಕೇಕ್ ಕಟ್ ಮಾಡಿ, ಪಟಾಕಿ ಸಿಡಿಸುವ ಮೂಲಕ ಈ ಲಕ್ಕಿ ಬುಲ್ ನ ಬರ್ತ್ ಡೇ ಆಚರಿಸಿದ್ದಾರೆ.

32 ವರ್ಷದ ಸುನಿಲ್ ದೇಸಾಯಿ ಅವರು ಎತ್ತಿನಗಾಡಿ ಸ್ಪರ್ಧೆಗಾಗಿಯೇ ಒಂದು ಜೊತೆ ವಿಶೇಷ ಎತ್ತುಗಳನ್ನು ಹೊಂದಿದ್ದು, ಅವರ ಎತ್ತುಗಳು ಈ ಪ್ರದೇಶದಲ್ಲಿ ಅತ್ಯಂತ ಜನಪ್ರಿಯವಾಗಿವೆ. ದೇಸಾಯಿ ಕುಟುಂಬ ಆ ಎತ್ತುಗಳನ್ನು ತಮ್ಮ ಮಕ್ಕಳಂತೆಯೇ ನೋಡಿಕೊಳ್ಳುತ್ತಿದೆ. ಅಲ್ಲದೆ ಉತ್ತಮ ಎತ್ತುಗಳನ್ನು ಹೊಂದುವ ಮೂಲಕ ಎತ್ತಿನ ಗಾಡಿ ಸ್ಪರ್ಧೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. 

ಸುನಿಲ್ ದೇಸಾಯಿ ಅವರು ರಾಜ ಎತ್ತನ್ನು ಒಂದು ವರ್ಷದ ಹಿಂದೆ 2.5 ಲಕ್ಷ ರೂಪಾಯಿಗೆ ಖರೀದಿಸಿದ್ದು, ತಮ್ಮ ಬಳಿ ಇರುವ ಕೃಷ್ಣ್ಯಾ ಎಂಬ ಮತ್ತೊಂದು ಎತ್ತಿನ ಜತೆ ಎತ್ತಿನ ಗಾಡಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ.

SCROLL FOR NEXT