ರಾಜ್ಯ

ಸಿಎಎ ಪ್ರತಿಭಟನೆ ವೇಳೆ ಪೊಲೀಸರು ಹಲ್ಲೆ ಮಾಡಿದ್ದಕ್ಕೆ ನನಗೆ ಯಾರೂ ಕ್ಷಮೆ ಕೇಳಿಲ್ಲ: ರಾಮಚಂದ್ರ ಗುಹಾ 

Sumana Upadhyaya

ಬೆಂಗಳೂರು; ಕಳೆದ ಡಿಸೆಂಬರ್ ನಲ್ಲಿ ನಗರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಹಲ್ಲೆ ನಡೆಸಿದ ಘಟನೆಗೆ ತಮ್ಮಲ್ಲಿ ಇದುವರೆಗೆ ಯಾರೂ ಕ್ಷಮೆ ಕೇಳಿಲ್ಲ ಎಂದು ಇತಿಹಾಸ ತಜ್ಞ ರಾಮಚಂದ್ರ ಗುಹಾ ತಿಳಿಸಿದ್ದಾರೆ.


ಒಂದು ವೇಳೆ ಅಂತಹ ಕ್ಷಮೆ ಕೇಳಿದ್ದರೂ ಕೂಡ ತಾವು ಅದನ್ನು ಒಪ್ಪುತ್ತಿರಲಿಲ್ಲ ಎಂದಿದ್ದಾರೆ. ನಿನ್ನೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ವಿಧಾನಸಭೆಯಲ್ಲಿ ಕಲಾಪ ವೇಳೆ ಮಾತನಾಡುತ್ತಾ ಕಳೆದ ಡಿಸೆಂಬರ್ ನಲ್ಲಿ ರಾಮಚಂದ್ರ ಗುಹಾ ಅವರ ಮೇಲೆ ಪೊಲೀಸರು ನಡೆಸಿದ ಹಲ್ಲೆಗೆ ಸಂಬಂಧಪಟ್ಟಂತೆ ನಾನು ದೂರವಾಣಿ ಮೂಲಕ ಮಾತನಾಡಿ ಕ್ಷಮೆ ಕೇಳಿದ್ದೇನೆ ಎಂದಿದ್ದರು. ಆದರೆ ಅದು ಸುಳ್ಳು. ನನಗೆ ಅವರಿಂದ ಯಾವುದೇ ಕರೆ ಬಂದಿಲ್ಲ ಮತ್ತು ಕ್ಷಮೆಯನ್ನೂ ಕೇಳಿಲ್ಲ ಎಂದು ಗುಹಾ ಹೇಳಿದ್ದಾರೆ.


ಈ ಕುರಿತು ಟ್ವೀಟ್ ಮಾಡಿರುವ ರಾಮಚಂದ್ರ ಗುಹಾ, ಒಂದು ವೇಳೆ ಅಂತಹ ಕ್ಷಮಾಪಣೆ ಬಂದಿದ್ದರೂ ಕೂಡ ನಾನು ಅದನ್ನು ತಿರಸ್ಕರಿಸುತ್ತಿದ್ದೆ. ಹೈಕೋರ್ಟ್ ಹೇಳಿರುವಂತೆ ಅಂದು ಪ್ರತಿಭಟನೆ ದಿನ ನಗರದಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಜಾರಿಗೆ ತಂದಿದ್ದು ಅಕ್ರಮ. ಆ ದಿನ ಸರ್ಕಾರದ ಅನಿಯಂತ್ರಿತ ಕ್ರಮವನ್ನು ಧಿಕ್ಕರಿಸಿದ ಸಾವಿರಾರು ಶಾಂತಿಯುತ ಪ್ರತಿಭಟನಾಕಾರರಲ್ಲಿ ನಾನು ಕೂಡ ಒಬ್ಬನಾಗಿದ್ದೆ ಎಂದು  ಹೇಳಲು ಹೆಮ್ಮೆಪಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

SCROLL FOR NEXT