ರಾಜ್ಯ

ಮಹದಾಯಿ ನ್ಯಾಯಾಧಿಕರಣದ ಅಂತಿಮ ವರದಿಗೆ ಆಗಸ್ಟ್ 19ರ ಗಡುವು ವಿಧಿಸಿದ ಕೇಂದ್ರ

Lingaraj Badiger

ಬೆಳಗಾವಿ: ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಅಧಿಸೂಚನೆ ಹೊರಡಿಸುವಂತೆ ಸುಪ್ರಿಂ ಕೋರ್ಟ್‌, ಕೇಂದ್ರ ಸರ್ಕಾರಕ್ಕೆ ಸೂಚಿದ ಮಾರನೇ ದಿನವೇ, ಮೋದಿ ಸರ್ಕಾರ ಮಹದಾಯಿ ನದಿ ನೀರು ಹಂಚಿಕೆ ನ್ಯಾಯಾಧಿಕರಣಕ್ಕೆ ಅಂತಿಮ ವರದಿ ಸಲ್ಲಿಸಲು ಆಗಸ್ಟ್ 19ರ ವರೆಗೆ ಕಾಲವಕಾಶ ನೀಡಿದೆ.

ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ಸಲ್ಲಿಸಿದ ಅರ್ಜಿಗಳ ಕುರಿತು ಆಗಸ್ಟ್ 19ರೊಳಗೆ ನ್ಯಾಯಾಧಿಕರಣ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿ ನ್ಯಾಯಾಧಿಕರಣ ನೀಡಿದ ತೀರ್ಪನ್ನು ಜಾರಿಗೊಳಿಸಬೇಕೆಂಬ ಕರ್ನಾಟಕದ ಮನವಿಗೆ ಸುಪ್ರೀಂ ಕೋರ್ಟ್‌ ಮನ್ನಣೆ ನೀಡಿದೆ. ತೀರ್ಪಿನ ಅನುಷ್ಠಾನಕ್ಕೆ ಅಧಿಸೂಚನೆ ಹೊರಡಿಸುವಂತೆ ನಿನ್ನೆ ಕೇಂದ್ರ ಸರಕಾರಕ್ಕೆ ಆದೇಶ ನೀಡಿದೆ. ಈ ಮೂಲಕ ಗೋವಾ ಮತ್ತು ಮಹಾರಾಷ್ಟ್ರಗಳ ಜತೆಗಿನ ನದಿ ನೀರು ವಿವಾದದಲ್ಲಿ ಕರ್ನಾಟಕಕ್ಕೆ ಮಹತ್ವದ ಕಾನೂನು ಜಯ ಸಿಕ್ಕಂತಾಗಿದೆ.

ನೀರು ಹಂಚಿಕೆಗೆ ಸಂಬಂಧಿಸಿ ನ್ಯಾಯಾಧಿಕರಣವು 2018ರ ಆಗಸ್ಟ್‌ 4 ರಂದು ಅಂತಿಮ ತೀರ್ಪು ನೀಡಿತ್ತು. ಆದರೆ, ಈ ತೀರ್ಪನ್ನು ಮರುಪರಿಶೀಲಿಸುವಂತೆ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಸರಕಾರಗಳು 2019ರ ಜು. 25ರಂದು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು. ಮೇಲ್ಮನವಿ ಸಲ್ಲಿಕೆ ಆಗುತ್ತಿದ್ದಂತೆ ಅಧಿಸೂಚನೆ ಹೊರಡಿಸುವ ನಿರ್ಣಯದಿಂದ ಕೇಂದ್ರ ಸರ್ಕಾರ ಹಿಂದೆ ಸರಿದಿತ್ತು. ರಾಜ್ಯ ಸರ್ಕಾರವು ಅಧಿಸೂಚನೆಗಾಗಿ ಕೇಂದ್ರವನ್ನು ಒತ್ತಾಯಿಸುತ್ತಲೇ ಇತ್ತು.

ಮೇಲ್ಮನವಿ ಅರ್ಜಿ ವಿಚಾರಣೆ ವೇಳೆ ಅಧಿಸೂಚನೆ ಹೊರಡಿಸಲು ಮೂರೂ ರಾಜ್ಯಗಳು ಯಾವುದೇ ಆಕ್ಷೇಪ ಸಲ್ಲಿಸದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಡಿ.ವಿ. ಚಂದ್ರಚೂಡ್‌ ಮತ್ತು ಹೇಮಂತ್‌ ಗುಪ್ತಾ ಅವರ ದ್ವಿಸದಸ್ಯ ಪೀಠವು ಅಧಿಸೂಚನೆ ಹೊರಡಿಸುವಂತೆ ಕೇಂದ್ರಕ್ಕೆ ಆದೇಶಿಸಿತು. ಜುಲೈ 15 ರಿಂದ ಮುಂದಿನ ಸುತ್ತಿನ ವಿಚಾರಣೆ ನಡೆಯಲಿದೆ.

SCROLL FOR NEXT