ರಾಜ್ಯ

ಜನಮಾನಸದಿಂದ ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳು 

Sumana Upadhyaya

ಬೆಂಗಳೂರು: ನಮ್ಮಲ್ಲಿ ಕ್ರಿಕೆಟ್, ಟೆನ್ನಿಸ್, ಕುಸ್ತಿ, ಕಬಡ್ಡಿ ಇತ್ಯಾದಿ ಆಟಗಳಿಗೆ ಭಾರೀ ಜನಪ್ರಿಯತೆಯಿದೆ. ಇವಿಷ್ಟೇ ಅಲ್ಲದೆ ನಮ್ಮ ದೇಶದ ಗ್ರಾಮೀಣ ಪ್ರದೇಶಗಳಲ್ಲಿ, ಪ್ರತಿ ರಾಜ್ಯಗಳಲ್ಲಿ ಅನೇಕ ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಗಳಿವೆ. ಅವುಗಳು ಇತ್ತೀಚಿನ ವರ್ಷಗಳಲ್ಲಿ ನಶಿಸಿ ಹೋಗುತ್ತಿವೆ. 


ಆಧುನಿಕ ಕ್ರೀಡೆಗಳಂತೆ ಗ್ರಾಮೀಣ ಕ್ರೀಡೆಗಳು ಸಹ ಬೌದ್ಧಿಕವಾಗಿ ಮತ್ತು ಶಾರೀರಿಕವಾಗಿ ದೇಹಕ್ಕೆ ಉತ್ತಮ ವ್ಯಾಯಾಮ ನೀಡುತ್ತದೆ. ಆದರೆ ಅವುಗಳಿಗೆ ಸಾಕಷ್ಟು ಪ್ರೋತ್ಸಾಹ ಸಿಗದಿರುವುದು ಮಾತ್ರ ದುರಂತ. ನಮ್ಮಲ್ಲಿನ ಪ್ರತಿಯೊಂದು ಗ್ರಾಮೀಣ ಕ್ರೀಡೆಗಳಿಗೆ ಅದರದ್ದೇ ಆದ ಕಥೆ ಮತ್ತು ಮಹತ್ವಗಳಿರುತ್ತವೆ. ಗ್ರಾಮೀಣ ಕ್ರೀಡೆಗಳನ್ನು ಆಡಲು ದೇಹದಲ್ಲಿ ಸಾಕಷ್ಟು ಶಕ್ತಿ ಬೇಕಾಗುತ್ತದೆ. ಕ್ರೀಡೆಯಲ್ಲಿ ಗೆಲ್ಲಬೇಕಾದರೆ ಶಕ್ತಿ ಜೊತೆಗೆ ಯುಕ್ತಿ ಕೂಡ ಬೇಕು. 


ಮಲ್ಲಕಂಬ ಇಂತಹ ಗ್ರಾಮೀಣ ಕ್ರೀಡೆಗಳಲ್ಲಿ ಒಂದು.ಇಲ್ಲಿ ಯೋಗ ಮತ್ತು ಕುಸ್ತಿ ಎರಡೂ ಇರುತ್ತದೆ. ಮಲ್ಲಕಂಬ ಕ್ರೀಡೆಯನ್ನು ತೆಗೆದುಕೊಳ್ಳುವುದಾದರೆ ಅದು ತ್ರೇತಾಯುಗಕ್ಕೆ ಹೋಗುತ್ತದೆ. ರಾಮಾಯಣದಲ್ಲಿ ಬರುವ ವಾನರರಾದ ವಾಲಿ, ಸುಗ್ರೀವ, ಹನುಮರು ಈಗಿನ ಕುಸ್ತಿಪಟುಗಳೆಂದು ಕರೆಯಲ್ಪಡುವ ರೀತಿಯಲ್ಲಿ ಆಡುತ್ತಿದ್ದರು, ಯುದ್ಧದಲ್ಲಿ ತಮ್ಮ ಶತ್ರುಗಳನ್ನು ದೈಹಿಕ ಶಕ್ತಿಯಿಂದಲೇ ಸೋಲಿಸುತ್ತಿದ್ದರು.


ಇದಕ್ಕೆ ಮಲ್ಲಕಂಬ ಎಂಬ ಹೆಸರು ಹೇಗೆ ಬಂತು ಎಂದರೆ ಜಾಂಬವಂತ ರಾಜ ಮರದ ಕಂಬವನ್ನು ನೆಡಿಸಿ ಸ್ಪರ್ಧೆಯನ್ನು ಆಯೋಜಿಸಿದರಂತೆ. ಕುಸ್ತಿಪಟುವನ್ನು ಕನ್ನಡದಲ್ಲಿ ಮಲ್ಲ ಎಂದು ಕರೆಯುತ್ತಾರೆ. ಹೀಗಾಗಿ ಮಲ್ಲಕಂಬ ಎಂಬ ಹೆಸರು ಬಂದಿದೆ ಎನ್ನುತ್ತಾರೆ. ಇದು ಜಿಮ್ನಾಸ್ಟಿಕ್ ಅಲ್ಲ ಎನ್ನುತ್ತಾರೆ ಮಹಾರಾಷ್ಟ್ರದಲ್ಲಿ ಮಲ್ಲಕಂಬ ಕಲಿತು ಬಂದು ರಾಜ್ಯದಲ್ಲಿ 4,500ಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಿದ ಧಾರವಾಡದ ಕಮಡೊಳ್ಳಿ ಗ್ರಾಮದ ಸಿದ್ದರೂಢ ಹೂಗಾರ್.ಮಲ್ಲಕಂಬ ದೇಹಕ್ಕೆ ಮಾತ್ರವಲ್ಲದೆ ಮನಸ್ಸಿಗೂ ಉತ್ತಮ ವ್ಯಾಯಾಮ ಕೊಡುತ್ತದೆ ಎಂದು ಹೇಳುತ್ತಾರೆ.


ಕಲ್ಲಾಟ ಮತ್ತೊಂದು ಗ್ರಾಮೀಣ ಕ್ರೀಡೆ, ಉತ್ತರ ಕರ್ನಾಟಕದಲ್ಲಿ ಬಹಳ ಜನಪ್ರಿಯ. ಹಲವು ಆಕಾರದ ಕಲ್ಲನ್ನು ಕೈಯಲ್ಲಿ ಸುತ್ತಿ ಕೆಳಗೆ ಬೀಳಿಸಿ ಆಡುವ ಆಟವಿದು. ಕಲ್ಲುಗಳು 10 ಕೆಜಿಯಿಂದ 100 ಕೆಜಿಯವರೆಗೆ ತೂಕವಿರುತ್ತದೆ. ಇಲ್ಲಿ ಆಡುವ ವ್ಯಕ್ತಿ ಸಾಕಷ್ಟು ಬಲಿಷ್ಠನಾಗಿರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಈ ಆಟ ಕಣ್ಮರೆಯಾಗುತ್ತಿದೆ.


ಕೆಸರಗದ್ದೆ ಓಟ ಮಲೆನಾಡು, ಕರಾವಳಿ, ಮೈಸೂರು ಭಾಗಗಳ ಸಾಂಪ್ರದಾಯಿಕ ಕ್ರೀಡೆ. ಮಣ್ಣಿನಲ್ಲಿ ಹಲವು ಬ್ಯಾಕ್ಟೀರಿಯಾಗಳನ್ನು ತಡೆಯುವ ಗುಣವಿದ್ದು ಚರ್ಮಕ್ಕೆ ಬಹಳ ಉತ್ತಮ. ಇದು ಕಂಬಳ ಕ್ರೀಡೆಯ ರೀತಿಯಿದ್ದರೂ ಇಲ್ಲಿ ಕೋಣಗಳು ಓಡುವುದಿಲ್ಲ. ಕುಸ್ತಿ ಹಳೆ ಮೈಸೂರು ಭಾಗದ ಪ್ರಮುಖ ಗ್ರಾಮೀಣ ಕ್ರೀಡೆಯಾದರೆ, ಕೈ ಕುಸ್ತಿ ಕಲಬುರಗಿ ಜಿಲ್ಲೆಯಲ್ಲಿ ಜನಪ್ರಿಯ.

SCROLL FOR NEXT