ರಾಜ್ಯ

ದೇಶದ್ರೋಹಿ ಕಾಶ್ಮೀರಿ ವಿದ್ಯಾರ್ಥಿಗಳ ಪರ ವಾದ ಮಾಡಬೇಡಿ: ವಕೀಲರು, ಸಾರ್ವಜನಿಕರಿಂದ ಘೇರಾವ್, ಪ್ರತಿಭಟನೆ 

Sumana Upadhyaya

ಧಾರವಾಡ: ದೇಶದ್ರೋಹದ ಕೇಸಿನಲ್ಲಿ ಬಂಧಿತರಾಗಿದ್ದ ಕಾಶ್ಮೀರ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ  ವಕೀಲರ ಕಾರುಗಳನ್ನು ಧಾರವಾಡ ಬಾರ್ ಅಸೋಸಿಯೇಷನ್ ನ ಸದಸ್ಯರು ತಡೆದು ಹಲ್ಲೆ ಮಾಡಿದ್ದಲ್ಲದೆ ಕೆಲ ದುಷ್ಕರ್ಮಿಗಳು ಅವರ ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಿನ್ನೆ ನಡೆದಿದೆ. 


ಅಲ್ಲದೆ ಕೇಸಿಗೆ ಸಂಬಂಧಪಟ್ಟಂತೆ ದಾಖಲೆಗಳನ್ನು ಪಡೆದುಕೊಳ್ಳಲು ಬಂದಾಗ ಹುಬ್ಬಳ್ಳಿ ವಕೀಲರ ಸಂಘದ ಸದಸ್ಯರಿಂದಲೂ ವಕೀಲರಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ದೇಶದ್ರೋಹಿಗಳ ಆರೋಪ ಎದುರಿಸುತ್ತಿರುವ ವಿದ್ಯಾರ್ಥಿಗಳ ಪರವಾಗಿ ವಾದ ಮಂಡಿಸುತ್ತಿರುವ ವಕೀಲರಿಗೆ ರಕ್ಷಣೆ ನೀಡಬೇಕೆಂದು ಹೈಕೋರ್ಟ್ ಆದೇಶ ನೀಡಿದ್ದರೂ ಈ ಘಟನೆ ನಡೆದಿದೆ.


ನಿನ್ನೆ ಧಾರವಾಡ ವಕೀಲರ ಸಂಘದ ಸದಸ್ಯರು ಮತ್ತು ಜನರು ಅಪಾರ ಸಂಖ್ಯೆಯಲ್ಲಿ ಕೋರ್ಟ್ ಪ್ರವೇಶದ್ವಾರದಲ್ಲಿ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಮೂವರು ಕಾಶ್ಮೀರ ವಿದ್ಯಾರ್ಥಿಗಳಿಗೆ ಜಾಮೀನು ಕೋರಿ ಪ್ರಧಾನ ಸೆಷನ್ಸ್ ಕೋರ್ಟ್ ಮುಂದೆ ವಕೀಲರು ಬಂದಿದ್ದರು. ಅವರು ಬರುತ್ತಿದ್ದಂತೆ ಜನರು ಮತ್ತು ವಕೀಲರು ಅವರ ವಿರುದ್ಧ ಘೋಷಣೆಗಳನ್ನು ಕೂಗಿ ನ್ಯಾಯಾಲಯದ ಆವರಣದೊಳಗೆ ಪ್ರವೇಶಿಸುವುದಕ್ಕೆ ತಡೆ ನೀಡಿದರು. 


ಈ ಗದ್ದಲ ಕೋರ್ಟ್ ರೂಂನಲ್ಲಿ ಸಹ ಮುಂದುವರಿಯಿತು. ವಕೀಲರು ಘೋಷಣೆಗಳನ್ನು ಕೂಗಿದಾಗ ನ್ಯಾಯಾಧೀಶ ಇಶಪ್ಪ ಬೊಟೆ ಅವರಿಗೆ ಎಚ್ಚರಿಕೆ ನೀಡಿದರು. ಕಾಶ್ಮೀರಿ ವಿದ್ಯಾರ್ಥಿಗಳ ಪರವಾಗಿ ಬಂದಿದ್ದ ವಕೀಲರ ಬಳಿ ಸಾಕಷ್ಟು ದಾಖಲೆಗಳಿಲ್ಲದ ಕಾರಣ ಜಾಮೀನು ಅರ್ಜಿ ಸಲ್ಲಿಸಲು ಸಾಧ್ಯವಾಗಲಿಲ್ಲ.

SCROLL FOR NEXT