ರಾಜ್ಯ

ಮಹದಾಯಿ ವಿವಾದ: ವಾರದಲ್ಲಿ ದೆಹಲಿಗೆ ರಾಜ್ಯದ ನಿಯೋಗ

Manjula VN

ಬೆಂಗಳೂರು: ಮಹದಾಯಿ ನೀರು ಹಂಚಿಕೆ ಸಂಬಂಧ ಅಧಿಸೂಚನೆ ಹೊರಡಿಸುವಂತೆ ಸುಪ್ರೀಂಕೋರ್ಟ್ ಮಧ್ಯಂತರ ಆದೇಶದಲ್ಲಿ ಸೂಚನೆ ನೀಡಿದ್ದು, ಇದರಂತೆ ಕೇಂದ್ರ ಸರ್ಕಾರವು ಕೂಡಲೇ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಡ ಹೇರಲು ಒಂದು ವಾರದೊಳಗಾಗಿ ದೆಹಲಿಗೆ ನಿಯೋಗ ಒಯ್ಯಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ. 

ಈ ನಿಯೋಗದಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ನಿರಾವರಿ ಯೋಜನೆಗಳ ಬಗ್ಗೆ ಅನುಭವ ಹೊಂದಿರುವ ಮಾಜಿ ಜಲಸಂಪನ್ಮೂಲ ಸಚಿವ ಹಾಗೂ ಹಾಲಿ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಇರಲಿದ್ದಾರೆಂದು ವರದಿಗಳು ತಿಳಿಸಿವೆ. 

ಮಹದಾಯಿ ನದಿ ನೀರು ಹಂಚಿಕೆ ಸಂಬಂಧದ ಅಂತಿಮ ವರದಿ ಸಲ್ಲಿಕೆಯಾಗದಿರುವುದನ್ನು ಮುಂದಿಟ್ಟುಕೊಂಡು ಅಧಿಸೂಚನೆ ಹೊರಡಿಸದಂತೆ ಅಡ್ಡಗಾಲು ಹಾಕರು ಗೋವಾ ಸರ್ಕಾರ ಯತ್ನ ನಡೆಸುತ್ತಿದೆ. ಹೀಗಾಗಿ ರಾಜ್ಯದ ಮುಂದಿರುವ ಆಯ್ಕೆಗಳ ಬಗ್ಗೆ ಸೋಮವಾರ ಕರ್ನಾಟಸಕ ನೀರಾವರಿ ನಿಗಮದ ಕಚೇರಿಯಲ್ಲಿ ಸಚಿವ ರಮೇಶ್ ಜಾರಕಿಹೊಳಿ  ಅವರು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ಮಹತ್ವದ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. 

ಸಭೆಯಲ್ಲಿ ನೀರು ಹಂಚಿಕೆ ಕುರಿತಂತೆ ಕೂಡಲೇ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಲಾಗಿದೆ. ಸುಪ್ರೀಂಕೋರ್ಟ್ ನಲ್ಲಿ ಮಹದಾಯಿ ಕುರಿತು ಅಂತಿಮ ವಿಚಾರಣೆ ಜುಲೈ15ರಿಂದ ಪ್ರಾರಂಭವಾಗಲಿದೆ. ಇದಕ್ಕೂ ಮೊದಲೇ ಅಧಿಸೂಚನೆ ಹೊರಡಿಸಿದರೆ, ಮುಂದಿನ ಕಾನೂನು ಹೋರಾಟ ಸುಗಮವಾಗಲಿದೆ. ಹೀಗಾಗಿ ಶೀಘ್ರವಾಗಿ ಅಧಿಸೂಚನೆ ಹೊರಡಿಸುವಂತೆ ಪ್ರಧಾನಿ  ಮೋದಿ, ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. 

SCROLL FOR NEXT