ರಾಜ್ಯ

ಮುಂದಿನ ತಿಂಗಳು ರಾಜ್ಯ ಬಜೆಟ್ ಮಂಡನೆ: ಶಿಕ್ಷಣ ಕ್ಷೇತ್ರಕ್ಕೆ ಏನೇನು ಯೋಜನೆಗಳಿವೆ, 'ಉಚಿತ ಸೈಕಲ್'ರದ್ದು? 

Sumana Upadhyaya

ಬೆಂಗಳೂರು: ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಿಸುವುದು 2010ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಬಿ ಎಸ್ ಯಡಿಯೂರಪ್ಪನವರ ಮಹಾತ್ವಾಕಾಂಕ್ಷಿ ಯೋಜನೆಯಾಗಿತ್ತು. ಆದರೆ ಮುಂದಿನ ತಿಂಗಳು 5ರಂದು ಮಂಡನೆಯಾಗುತ್ತಿರುವ ಬಜೆಟ್ ನಲ್ಲಿ ಅದು ಇಲ್ಲ ಎಂದು ಹೇಳಲಾಗುತ್ತಿದೆ. ಅದಕ್ಕೆ ಸರ್ಕಾರದ ಖಜಾನೆಯಲ್ಲಿ ಹಣಕಾಸು ಕೊರತೆ ಸಮಸ್ಯೆ ಉಂಟಾಗಿದೆ.


ಈ ವರ್ಷದ ಬಜೆಟ್ ನಲ್ಲಿ ಶಿಕ್ಷಣಕ್ಕೆ, ತಂತ್ರಜ್ಞಾನ ಮತ್ತು ಸಂಶೋಧನೆಗೆ ಹೆಚ್ಚು ಒತ್ತು ಕೊಟ್ಟಿರುವುದರಿಂದ ಶಾಲೆಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ ಒದಗಿಸಿಕೊಡಲು ಸರ್ಕಾರ ಮುಂದಾಗಿದೆ. 


ಈ ವರ್ಷ ಸಾರ್ವಜನಿಕ ಶಿಕ್ಷಣ ಇಲಾಖೆಗೆ ವಾರ್ಷಿಕ ಬಜೆಟ್ ನಲ್ಲಿ 20 ಸಾವಿರ ಕೋಟಿ ರೂಪಾಯಿಗಳನ್ನಿಡಲಿದ್ದು ಅವುಗಳಲ್ಲಿ 18 ಸಾವಿರ ಕೋಟಿ ರೂಪಾಯಿ ಶಿಕ್ಷಕರ ವೇತನಕ್ಕೆ ಹೋಗುತ್ತದೆ. ಕಳೆದ ವರ್ಷದ ಬಜೆಟ್ ನಲ್ಲಿ ಶಿಕ್ಷಣ ಇಲಾಖೆಗೆ 22 ಸಾವಿರ ಕೋಟಿ ರೂಪಾಯಿಗಳನ್ನಿಡಲಾಗಿತ್ತು. ಈ ವರ್ಷ 3 ಸಾವಿರ ಕೋಟಿ ರೂಪಾಯಿ ಹೆಚ್ಚು ಸಿಗಬಹುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ನಿರೀಕ್ಷಿಸಿದ್ದರು. ಆದರೆ ಹಣಕಾಸು ನೆರವು ಆರ್ಥಿಕ ಇಲಾಖೆ ಮತ್ತು ಯಡಿಯೂರಪ್ಪನವರನ್ನು ಅವಲಂಬಿಸಿಕೊಂಡು ಇರುತ್ತದೆ.


ಈ ವರ್ಷದ ಬಜೆಟ್ ನಲ್ಲಿ ಶಿಕ್ಷಣಕ್ಕೆ ಏನೇನಿದೆ: ಮಧ್ಯಾಹ್ನದ ಬಿಸಿಯೂಟ, ಯೂನಿಫಾರ್ಮ್, ಶೂ, ಸಾಕ್ಸ್, ಬ್ಯಾಗ್ ಮತ್ತು ಪುಸ್ತಕಗಳನ್ನು ಶಾಲಾ ಮಕ್ಕಳಿಗೆ ಒದಗಿಸುವುದು ಈ ವರ್ಷದ ಬಜೆಟ್ ನಲ್ಲಿ ಇರಲಿದೆ. ಇದು ಮೂಲ ಅವಶ್ಯಕತೆಯಾದರೆ ದುಬಾರಿಯೆನಿಸುವ ಉಚಿತ ಸೈಕಲ್ ನ್ನು ಆರ್ಥಿಕ ಹೊರೆಯಿಂದಾಗಿ ಈ ವರ್ಷ ವಿತರಣೆ ಮಾಡುವುದಿಲ್ಲ ಎಂದು ಹೇಳಲಾಗುತ್ತದೆ.

ಸೃಜನಾತ್ಮಕ ರೀತಿಯಲ್ಲಿ ಮಕ್ಕಳಿಗೆ ಬೋಧನೆ ಮಾಡುವ ಪ್ರಶಸ್ತಿ ಪಡೆದ ಶಿಕ್ಷಕರ ಬಗ್ಗೆ ಪುಸ್ತಕ ಹೊರತರುವ ಯೋಜನೆ ಶಿಕ್ಷಣ ಇಲಾಖೆಗಿದೆ. ನಿರ್ದಿಷ್ಟ ಸಹಾಯವಾಣಿ ಮತ್ತು ಶಿಕ್ಷಕರಿಗೆ ಶಿಕ್ಷಕ ಮಿತ್ರ ಆಪ್ ಹೊರತರುವ ಯೋಜನೆಯಿದೆ. ಅದರ ಮೂಲಕ ಶಿಕ್ಷಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಶಿಕ್ಷಣ ಸಚಿವರಿಗೆ ಪ್ರತ್ಯೇಕ ಡ್ಯಾಶ್ ಬೋರ್ಡ್ ಸ್ಥಾಪಿಸಲಾಗುತ್ತಿದ್ದು ಇದರ ಮೂಲಕ ಶಿಕ್ಷಕರ ಕುಂದು ಕೊರತೆಗಳನ್ನು ಆಲಿಸಲಾಗುತ್ತದೆ.


ಬ್ಯಾಗ್ ರಹಿತ ದಿನ ಆಚರಣೆಗೆ ಸಹ ಇಲಾಖೆಗೆ ಸ್ವಲ್ಪ ಹಣ ಸಿಗಲಿದೆ. ದೆಹಲಿ ಸರ್ಕಾರ ಆರಂಭಿಸಿರುವ ಹ್ಯಾಪಿನೆಸ್ ಸಿಲೆಬಸ್ ಮಾದರಿಯಲ್ಲಿ ಕರ್ನಾಟಕ ಸರ್ಕಾರ ಕೂಡ ತಿಂಗಳಲ್ಲಿ ಕೆಲವು ಶನಿವಾರಗಳಂದು ಶನಿವಾರ ಸಂಭ್ರಮ ಎಂದು ಆರಂಭಿಸಲಿದೆ.


ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ಸಚಿವ ಸುರೇಶ್ ಕುಮಾರ್, ಗುಣಮಟ್ಟದ ಶಿಕ್ಷಣ ಮತ್ತು ಸರ್ಕಾರಿ ಶಾಲೆಗಳ ಬಲವರ್ಧನೆಗೆ ಬಜೆಟ್ ನಲ್ಲಿ ಆದ್ಯತೆ ನೀಡಲಾಗುವುದು. ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಪೋಷಕರು ತಮ್ಮ ಆದಾಯದಲ್ಲಿ ಕನಿಷ್ಠ ಶೇಕಡಾ 30ನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಿಡುತ್ತಿದ್ದು ಅವರನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಿದರೆ ಮಕ್ಕಳು ನಮ್ಮ ಶಾಲೆಗೆ ಬರುತ್ತಾರೆ. ಹೀಗಾಗಿ ತಂತ್ರಜ್ಞಾನ ಆಧಾರಿತ ಸೃಜನಾತ್ಮಕ ರೀತಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಶಿಕ್ಷಣ ನೀಡಲು ಬಜೆಟ್ ನಲ್ಲಿ ಅನುದಾನ ಸಹಾಯವನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಹೇಳಿದರು.

SCROLL FOR NEXT