ರಾಜ್ಯ

ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದು: ಜಗದೀಶ್ ಶೆಟ್ಟರ್ 

Sumana Upadhyaya

ಬೆಂಗಳೂರು: ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ 109ಕ್ಕೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದ್ದು ಇದರಿಂದ ಯೋಜನೆಯೊಂದಕ್ಕೆ ಒಪ್ಪಿಗೆ ಸಿಗಲು ಈಗಿರುವ 60 ದಿನಗಳಿಂದ 30 ದಿನಗಳಿಗೆ ಇಳಿಕೆಯಾಗಲಿದೆ ಎಂದು ಭಾರೀ ಮತ್ತು ಮಧ್ಯಮ ಗಾತ್ರ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.


ಅವರು ನಿನ್ನೆ ಭಾರತೀಯ ಕೈಗಾರಿಕೆಗಳ ಸಮ್ಮೇಳನದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ತಿದ್ದುಪಡಿ ಕಾನೂನು ಭೂ ಒತ್ತುವರಿ ಮತ್ತು ಭೂ ಪರಿವರ್ತನೆ ಎರಡಕ್ಕೂ ಅನ್ವಯವಾಗುತ್ತದೆ. ಅನುಮೋದನೆ ಪ್ರಕ್ರಿಯೆ 30 ದಿನಗಳಿಗಿಂತ ಹೆಚ್ಚಾದರೆ ಅನುಮೋದನೆ ಮತ್ತು ಪರಿವರ್ತನೆ ಸಿಕ್ಕಿದೆ ಎಂದು ಪರಿಗಣಿಸಲಾಗುತ್ತದೆ ಎಂದರು.


ಉತ್ಪಾದನಾ ವಲಯಗಳು ಎದುರಿಸುತ್ತಿರುವ ಸಮಸ್ಯೆಗಳು, ಸವಾಲುಗಳನ್ನು ಬಗೆಹರಿಸಲು ರಾಜ್ಯ ಸರ್ಕಾರ ಹೊಸ ಕೈಗಾರಿಕಾ ನೀತಿಯನ್ನು ಜಾರಿಗೆ ತರಲಿದ್ದು ಅದರಡಿ ಕೈಗಾರಿಕಾ ವಲಯಗಳಿಗೆ ಪ್ರೋತ್ಸಾಹಕ ಉತ್ಪಾದನೆಗಳು, ಸ್ಥಳೀಯಾಭಿವೃದ್ಧಿ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆಗಳ ಬಗ್ಗೆ ಆದ್ಯತೆ ನೀಡಲಾಗುವುದು ಎಂದರು.


ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಹೂಡಿಕೆ ಕರ್ನಾಟಕ ಸಮಾವೇಶದ ಬಗ್ಗೆ ಮಾತನಾಡಿದ ಅವರು, ರಾಜ್ಯದ ಎರಡನೇ ಮತ್ತು ಮೂರನೇ ದರ್ಜೆ ನಗರಗಳಲ್ಲಿ ಕೈಗಾರಿಕಾಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಸಮ್ಮೇಳನದಲ್ಲಿ ಕನಿಷ್ಠ 52 ಉದ್ಯಮಿಗಳ ಜೊತೆ ನಿಲುವಳಿ ಒಪ್ಪಂದಗಳಿಗೆ ಸಹಿ ಹಾಕಿದ್ದು ಇದರಡಿ 72 ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವ ಮತ್ತು 90 ಸಾವಿರ ಜನರಿಗೆ ಉದ್ಯೋಗ ಕಲ್ಪಿಸುವ ಯೋಜನೆಯಿದೆ ಎಂದು ಹೇಳಿದರು.

SCROLL FOR NEXT