ರಾಜ್ಯ

ದಾವೂದ್ ಸಹಚರರಿಂದ ಜೀವಕ್ಕೆ ಆಪತ್ತು: ಮುಂಬೈಗೆ ಕಳುಹಿಸದಂತೆ ಪೊಲೀಸರನ್ನು ಬೇಡಿಕೊಂಡ ರವಿ ಪೂಜಾರಿ

Nagaraja AB

ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿಯನ್ನು ಅಜ್ಞಾನ ಸ್ಥಳದಲ್ಲಿ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದು,ಆತ ಭಾಗಿಯಾಗಿರುವ ಪ್ರಕರಣಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. 

ಈ ಮಧ್ಯೆ ಆತನ ಮೇಲಿನ ಪ್ರಕರಣಗಳ ವಿಚಾರಣೆಗಾಗಿ ಯಾವುದೇ ಸಮಯದಲ್ಲೂ ಮುಂಬೈ ಪೊಲೀಸರು ಕರೆಸಿಕೊಳ್ಳುವ ಸಾಧ್ಯತೆ ಇದೆ.ಮುಂಬೈಯಲ್ಲಿ ತನ್ನಗೆ ಜೀವ ಬೆದರಿಕೆ ಇರುವುದರಿಂದ ಅಲ್ಲಿಗೆ ಕಳುಹಿಸದಂತೆ ರವಿ ಪೂಜಾರಿ ವಿಚಾರಣಾಧಿಕಾರಿಗಳ ಮುಂದೆ ಕಣ್ಣೀರು ಇಟ್ಟಿದ್ದಾನೆ ಎಂಬಂತಹ ಮಾಹಿತಿ ತಿಳಿದುಬಂದಿದೆ.

ಭಾರತದಿಂದ ವಿದೇಶಕ್ಕೆ ಹಾರುವ ಮುನ್ನ ಮುಂಬೈನಲ್ಲಿ ಹಲವಾರು ಪ್ರಕರಣಗಳಲ್ಲಿ ರವಿ ಪೂಜಾರಿ ಭಾಗಿಯಾಗಿದ್ದು, ಮುಂಬೈ ಪೊಲೀಸರ ಕಸ್ಟಡಿಗೆ ಒಪ್ಪಿಸುತ್ತಾರೆ ಎಂಬುದು ಆತನಿಗೆ ತಿಳಿದಿದ್ದೆ. ಆದ್ದರಿಂದ ಅಲ್ಲಿಗೆ ಕಳುಹಿಸದಂತೆ ಬೇಡಿಕೊಂಡಿದ್ದಾನೆ. ಮುಂಬೈನಲ್ಲಿ ಆತನ ಹಲವು ವಿರೋಧಿಗಳಿದ್ದು, ಅಲ್ಲಿಗೆ ಕಳುಹಿಸಿದ್ದರೆ ಕೊಲ್ಲುತ್ತಾರೆ ಎಂದು ಆತ ಪೊಲೀಸರಿಗೆ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ. 

ಒಂದು ಕಾಲದಲ್ಲಿ ಪೂಜಾರಿ ಅಂಡರ್ ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ಸಹಚರ ಆಗಿದ್ದ ರವಿ ಪೂಜಾರಿ ಆತನ ಗ್ಯಾಂಗ್ ತೊರೆದು ಚೋಟಾ ರಾಜನ್ ಗುಂಪು ಸೇರಿಕೊಂಡಿದ್ದ. ಕೆಲವು ಸಂದರ್ಭಗಳಲ್ಲಿ ರಾಜನ್  ಹತ್ಯೆ ಮಾಡಲು ದಾವೂದ್ ಕಡೆಯವರು ಪ್ರಯತ್ನಿಸಿದ್ದಾರೆ.ಮುಂಬೈನಲ್ಲಿದ್ದಾಗ ರವಿ ಪೂಜಾರಿ ಕೂಡಾ ದಾವೂದ್ ಮತ್ತಿತರ ಭೂಗತ ಪಾತಕಿಗಳಿಂದ ಬೆದರಿಕೆ ಎದುರಿಸುತ್ತಿದ್ದ. ಮರ್ಡರ್ ಕೇಸ್ ವೊಂದರಲ್ಲಿ ಬೇಲ್ ಸಿಕ್ಕ ನಂತರ ದೇಶದಿಂದ ಪಲಾಯನವಾಗಿದ್ದ. ಆದರೆ, ಮತ್ತೆ ವಿಚಾರಣೆ ಎದುರಿಸುತ್ತಿದ್ದಾನೆ. ಕಳೆದ ಎರಡು ದಶಕಗಳಲ್ಲಿ ವ್ಯಾಪಾರಿಗಳು, ಸೆಲೆಬ್ರಿಟಿಗಳು ಸೇರಿದಂತೆ ಹಲವು ಜನರಿಗೆ ಕೊಲೆ ಬೆದರಿಕೆ ಹಾಕಿದ್ದ.

ದಾವೂದ್ ಸಹಚರರು ಮತ್ತಿತರರಿಂದ ತಮಗೆ ಜೀವ ಬೆದರಿಕೆ ಇರುವುದರಿಂದ ಮುಂಬೈಗೆ ಕಳುಹಿಸದಂತೆ ರವಿ ಪೂಜಾರಿ ಬೇಡಿಕೊಳ್ಳುತ್ತಿದ್ದಾನೆ. ಒಂದು ವೇಳೆ ಮುಂಬೈ ಪೊಲೀಸರು ನ್ಯಾಯಾಲಯದ ಮೊರೆ ಹೋದರೆ ಆತನನ್ನು ಮುಂಬೈಗೆ ಕಳುಹಿಸಬೇಕಾ ಅಥವಾ ಬೇಡವೇ ಎಂಬುದರ ಬಗ್ಗೆ ನ್ಯಾಯಾಲಯ ನಿರ್ಧರಿಸುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಮಾರ್ಚ್ 7ರವರೆಗೂ ರವಿ ಪೂಜಾರಿಯನ್ನು ಪೊಲೀಸರಿಗೆ ಕಸ್ಟಡಿಗೆ ನೀಡಲಾಗಿದೆ. ಕರ್ನಾಟಕದಲ್ಲಿ ಆತನ ಮೇಲೆ 100 ಕೇಸ್ ಗಳಿದ್ದು, ಅದರ ವಿಚಾರಣೆಗಾಗಿ ಕಸ್ಟಡಿಯನ್ನು ವಿಸ್ತರಿಸುವಂತೆ ಪೊಲೀಸರು ನ್ಯಾಯಾಲಯವನ್ನು ಕೋರುವ ಸಾಧ್ಯತೆ ಇದೆ. 

ದಕ್ಷಿಣ ಕನ್ನಡ ಜಿಲ್ಲೆ ಮಲ್ಪೆಯ ರವಿ ಪೂಜಾರಿ ಮೇಲೆ ಕೇರಳ, ಮಹಾರಾಷ್ಟ್ರ, ಕರ್ನಾಟಕ ಹಾಗೂ ಗುಜರಾತ್ ರಾಜ್ಯಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ಒಂದರಲ್ಲಿಯೇ 46 ಪ್ರಕರಣಗಳಿವೆ. 

SCROLL FOR NEXT