ರಾಜ್ಯ

ತುಮಕೂರಿಗೆ ಪ್ರಧಾನಿ ಭೇಟಿ: ಮೋದಿ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿದ್ದ ರೈತರ ಬಂಧನ

Shilpa D

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿದ್ದ 15 ರೈತರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಇಂದು ಮಧ್ಯಾಹ್ನ ತುಮಕೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ತುಮಕೂರಿನಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿವಿಧ ರಾಜ್ಯಗಳ 32 ರೈತರಿಗೆ " ಕರ್ಮಣ" ಪ್ರಶಸ್ತಿಯನ್ನು ಮೋದಿ ವಿತರಿಸಲಿದ್ದಾರೆ. 

ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದ ಶಿವಮೊಗ್ಗ ಜಿಲ್ಲಾ ರೈತ ಸಂಘದ ಸದಸ್ಯರು ಇಂದು ತುಮಕೂರಿಗೆ ತೆರಳುತ್ತಿದ್ದರು. 

ಈ ವೇಳೆ ರೈಲ್ವೆ ನಿಲ್ದಾಣದಲ್ಲಿ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದ್ದರಿಂದ 15 ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ರೈತ ಸಂಘದ ಜಿಲ್ಲಾಧ್ಯಕ್ಷ ಎಸ್. ಶಿವಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇ.ಬಿ. ಜಗದೀಶ್, ಜಿಲ್ಲಾ ಕಾರ್ಯದರ್ಶಿ ಪಿ.ಡಿ. ಮಂಜಪ್ಪ, ಸೇರಿದಂತೆ 15 ಜನ ರೈತರನ್ನು ವಶಕ್ಕೆ ಪಡೆಯಲಾಗಿದೆ.

ಇಂದು ತುಮಕೂರಿಗೆ ಪ್ರಧಾನಿ ಮೋದಿ ಆಗಮಿಸುತ್ತಿದ್ದು, ಕಿಸಾನ್ ಸಮ್ಮಾನ್ ಯೋಜನೆಯ 4ನೇ ಕಂತಿನ ಹಣ ಬಿಡುಗಡೆ ಹಾಗೂ ರೈತ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ. ಹೊಸ ವರ್ಷದಲ್ಲಿ ಪ್ರಧಾನಿ ಮೋದಿ ಅವರು ಭೇಟಿ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಸಿದ್ದಗಂಗಾ ಮಠ ಸೇರಿದಂತೆ ಕೆಲವು ಖಾಸಗಿ ಕಾರ್ಯಕ್ರಮಗಳಲ್ಲಿ ಪ್ರಧಾನಿ ಭಾಗಿಯಾಗಲಿದ್ದಾರೆ.
 

SCROLL FOR NEXT