ರಾಜ್ಯ

107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

Manjula VN

ಬೆಂಗಳೂರು: ರಾಷ್ಟ್ರದಲ್ಲಿ ವಿಜ್ಞಾನದ ಅಭಿವೃದ್ಧಿಗೆ ಉತ್ತೇಜನ ನೀಡುವ ಸಂಬಂಧ ನಗರದಲ್ಲಿ ಆಯೋಜಿಸಲಾಗಿರುವ ಪ್ರತಿಷ್ಠಿತ 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನಕ್ಕೆ ಶುಕ್ರವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚಾಲನೆ ನೀಡಿದರು. 

5 ದಿನಗಳ ಈ ಕಾರ್ಯಕ್ರಮದಲ್ಲಿ 15,000 ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದು. 150 ಕ್ಕೂ ಹೆಚ್ಚು ಸಂಘ, ಸಂಸ್ಥೆಗಳು ಪಾಲ್ಗೊಂಡಿವೆ. 

ಕಾರ್ಯಕ್ರಮದಲ್ಲಿ ಭಾರತ ವಿಜ್ಞಾನ ಕಾಂಗ್ರೆಸ್ ಅಧ್ಯಕ್ಷ ಪ್ರೊ.ರಂಗಪ್ಪ ಸ್ವಾಗತ ಭಾಷಣ ಮಾಡಿದ್ದು, ಮೋದಿ ಆರಂಬಿಸಿದ ಹಲವು ಯೋಜನೆಗಳು ಈಗಾಗಲೇ ಫಲ ನೀಡುತ್ತಿವೆ. ದೇಶದ ಅಭಿವೃದ್ಧಿಗಾಗಿ ರೈತರಿಗೆ ಶಕ್ತಿ ತುಂಬುವುದು ಅಗತ್ಯ ಎಂದು ಹೇಳಿದರು. 

ಬಳಿಕ ಮಾತನಾಡಿದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಡಾ.ಹರ್ಷವರ್ಧನ್ ಅವರು, ಪ್ರಧಾನಮಂತ್ರಿಗಳು ಎಲ್ಲಾ ಕ್ಷೇತ್ರಗಳಿಗೂ ಗುರಿಗಳನ್ನು ನಿಗದಿಪಡಿಸಿ ಅದಕ್ಕೆ ಅನುಗುಣವಾದ ನೀತಿ ರೂಪಿಸುತ್ತಿದ್ದಾರೆ. ಎಲ್ಲರನ್ನೂ ಭಾಗಿದಾರರನ್ನಾಗಿ ಮಾಡಿ ಯೋಜನೆ ಅನುಷ್ಠಾನಕ್ಕೆತರಲು ಶ್ರಮಿಸುತ್ತಿದ್ದಾರೆಂದು ಹೇಳಿದರು. 

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾತನಾಡಿ, ಇಂತಹ ದೊಡ್ಡ ಕಾರ್ಯಕ್ರಮವನ್ನು ನಡೆಸಲು ಅವಕಾಶ ಸಿಕ್ಕಿದ್ದು ನಮ್ಮ ರಾಜ್ಯಕ್ಕೆ ಸಿಕ್ಕ ಗೌರವ ಎಂದೇ ಭಾವಿಸುತ್ತೇನೆ. ಈ ವರ್ಷದ ವಿಜ್ಞಾನ ಸಮಾವೇಶದ ಆಶಯದಂತೆ ಗ್ರಾಮೀಣ ಅಭಿವೃದ್ಧಿಗೆ ವೈಜ್ಞಾನಿಕ ಸಂಶೋಧನೆಗಳ ಫಲ ತಲುಪಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದರು. 

ನಮ್ಮ ಪ್ರಧಾನಿಗಳು ರೈತರ ಆದಾಯ ದ್ವಿಗುಣಗೊಳಿಸುವ ಗುರಿ ನೀಡಿದ್ದಾರೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನಗೆ ರಾಜ್ಯ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ಒದಗಿಸುತ್ತಿದೆ. ಈ ಸಮಾವೇಶದ ಫಲಶ್ರುತಿಯನ್ನು ರಾಜ್ಯ ಸರ್ಕಾರವೂ ಕುತೂಹಲದಿಂದ ಗಮನಿಸುತ್ತಿದೆ. ವಿಜ್ಞಾನಿಗಳ ಚಿಂತನೆಗಳನ್ನು ತನ್ನ ನೀತಿಗಳಲ್ಲಿ ಅಳವಡಿಸಿಕೊಳ್ಳಲು ಬದ್ದವಾಗಿದೆ ಎಂದರು.

SCROLL FOR NEXT