ಬೆಂಗಳೂರು: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ ರದ್ದು ಹಾಗೂ ಪೌರತ್ವ ಕಾಯ್ದೆ ಕುರಿತಂತೆ ನೀಡಲಾಗುತ್ತಿರುವ ಹೇಳಿಕೆಗಳನ್ನು ನಿಲ್ಲಿಸುವಂತೆ ತಿಳಿಸಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಆಗಂತುಕರು ಜೀವ ಬೆದರಿಕೆ ಕರೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಸಚಿವರಿಗೆ ಭದ್ರತೆ ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ.
ಕಳೆದ ಶುಕ್ರವಾರ ಬೆದರಿಕೆ ಕರೆ ಬಂದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಕುರಿತು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ಅವರು, 370ನೇ ವಿಧಿ ಹಾಗೂ ಪೌರತ್ವ ಕಾಯ್ದೆ ಕುರಿತಂತೆ ನೀವು ಬಹಳ ಮಾತನಾಡುತ್ತಿದ್ದೀರಿ, 48 ಗಂಟೆಗಳೊಳಗಾಗಿ ನಿಮ್ಮ ಮಾತನ್ನು ನಿಲ್ಲಸದಿದ್ದರೆ, ನಮಗೆ ಏನು ಮಾಡಬೇಕೆಂದು ನಮಗೆ ಗೊತ್ತಿದೆ ಎಂದು ಬೆದರಿಕೆ ಹಾಕಿದ್ದಾರೆಂದು ಹೇಳಿದ್ದಾರೆ.
ರಾಷ್ಟ್ರೀಯ ಹಿತಾಸಕ್ತಿಯಿಂದಾಗಿ ಹೋರಾಟ ನಡೆಸಲು ಮುಂದಾದಾಗ ಇಂತಹ ನೂರಾರು ಕರೆಗಳು ಬರುತ್ತವೆ ಎಂಬುದು ನನಗೆ ಗೊತ್ತಿದೆ. ಅವರಿಗೆ ಏನು ಮಾಡಬೇಕು ಅವರು ಮಾಡಲಿ. ಜನರ ಬಳಿ ಹೋಗಿ ನಾವು ಯಾವ ತಪ್ಪನ್ನು ಮಾಡುತ್ತಿದ್ದೇವೆಂದು ಹೇಳಲಿ. ಇಂತಹ ಬೆದರಿಕೆಗಳಿಗೆ ಹೆದರುವ ವ್ಯಕ್ತಿ ನಾನಲ್ಲ. ಬೇಕಿದ್ದರೆ, ಬಂದು ಬಹಿರಂಗವಾಗಿ ಚರ್ಚೆ ನಡೆಸಲಿ. ಆದರೆ, ಇಂತಹ ಹೇಡಿತನದ ವರ್ತನೆಗಳು ಬೇಡ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು, ತಮಿಳುನಾಡು ಮೂಲದ ಸಂಖ್ಯೆಯಿಂದ ಕರೆ ಬಂದಿದ್ದು, ವ್ಯಕ್ತಿಯ ಬಗ್ಗೆ ಈ ವರೆಗೂ ಮಾಹಿತಿ ದೊರೆತಿಲ್ಲ. ಕಾಲ್ ಮಾಡಿದ್ದ ಸಂಖ್ಯೆಯನ್ನು ಟ್ರೇಸ್ ಮಾಡಲಾಗುತ್ತಿದೆ. ಈಗಾಗಲೇ ಅಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ.