ರಾಜ್ಯ

ಬೆಂಗಳೂರಿಗರಿಗೆ ಈ ವರ್ಷ ಅವರೆ ಕಾಯಿ ಮೇಳದಲ್ಲಿ ತಿಂಡಿಗಳನ್ನು ಸವಿಯುವ ಸೌಭಾಗ್ಯ ಇಲ್ಲ 

Sumana Upadhyaya

ಬೆಂಗಳೂರು: ಬೆಂಗಳೂರಿಗರಿಗೆ ಈ ವರ್ಷ ಅವರೆ ಕಾಯಿ ಮೇಳ ಇರುವುದಿಲ್ಲ. ನಗರದ ವಿ ವಿ ಪುರಂನ ಫುಡ್ ಸ್ಟ್ರೀಟ್ ನಲ್ಲಿ ಪ್ರತಿವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ಅಥವಾ ಜನವರಿ ಮೊದಲ ವಾರದಲ್ಲಿ ಅವರೆ ಕಾಯಿ ಮೇಳವನ್ನು ವಾಸವಿ ಕಾಂಡಿಮೆಟ್ಸ್ ಏರ್ಪಡಿಸಿಕೊಂಡು ಬರುತ್ತದೆ. ಆದರೆ ಈ ವರ್ಷ ಸ್ವಚ್ಛತೆಯ ಕಾರಣವೊಡ್ಡಿ ಮೇಳ ನಡೆಸಲು ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಅನುಮತಿ ನಿರಾಕರಿಸಿದೆ.


ಇದು ಅನೇಕ ಬೆಂಗಳೂರಿಗರಿಗೆ ಬೇಸರ ತರಿಸಿದೆ. ವರ್ಷದಲ್ಲಿ ಎರಡು ಋತುವಿನಲ್ಲಿ ಬೆಳೆಯುವ ಅವರೆಕಾಯಿ ಬಹುತೇಕರಿಗೆ ಅಚ್ಚುಮೆಚ್ಚು. ಜನವರಿ ಮತ್ತು ಜುಲೈ ತಿಂಗಳಲ್ಲಿ ಆಗುವ ಈ ಬೆಳೆಯ ಮೇಳವನ್ನು ರಸ್ತೆ ಬದಿ ನಡೆಸುವಾಗ ಸ್ವಚ್ಛತೆಯಿರುವುದಿಲ್ಲ. ಅಲ್ಲದೆ ಘನತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಕೂಡ ಇಲ್ಲದಿರುವುದರಿಂದ ಈ ವರ್ಷ ಮೇಳಕ್ಕೆ ಅನುಮತಿಯಿಲ್ಲ ಎಂದು ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ವಾಸವಿ ಕಾಂಡಿಮೆಟ್ಸ್ ಗೆ ಕಳುಹಿಸಿದ ನೊಟೀಸ್ ನಲ್ಲಿ ತಿಳಿಸಿದೆ.


ವಿ ವಿ ಪುರಂ ಕಾರ್ಪೊರೇಟರ್ ವಾಣಿ ವಿ ರಾವ್, ಕಳೆದ ನಾಲ್ಕು ವರ್ಷಗಳಿಂದ ರಸ್ತೆ ಬದಿ ಜನರು ತಿಂದ ಆಹಾರದ ತಟ್ಟೆಗಳನ್ನು ಚರಂಡಿಯಲ್ಲಿ ಎಸೆದು ಹೋಗುತ್ತಾರೆ, ವಸತಿ ಪ್ರದೇಶಗಳಲ್ಲಿ ತೆರೆದ ಬಾವಿಗಳನ್ನು ಸಹ ಗಲೀಜು ಮಾಡಿ ಹೋಗುತ್ತಾರೆ ಎಂದು ನಮಗೆ ದೂರುಗಳು ಬಂದಿವೆ. ಮೇಳಕ್ಕೆ ಬರುವವರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಾರೆ. ವಾರ್ಡ್ ಸಮಿತಿ ಸಭೆಗಳಲ್ಲಿ ಭಾಗವಹಿಸುವ ನಿವಾಸಿಗಳಿಂದ ನಮಗೆ ಸಾಕಷ್ಟು ದೂರುಗಳು ಬಂದಿವೆ. ಇದಕ್ಕಾಗಿ ಈ ಬಾರಿ ಪಾಲಿಕೆ ಅನುಮತಿ ಕೊಟ್ಟಿಲ್ಲ ಎನ್ನುತ್ತಾರೆ.


ಬಿಬಿಎಂಪಿಯ ಆರೋಗ್ಯಾಧಿಕಾರಿ ದೇವಕರಾಣಿ, ಬದಲಿಯನ್ನು ನಾವು ಸೂಚಿಸಿದ್ದೇವೆ. ನೊಟೀಸ್ ಕೊಟ್ಟು ಕರೆ ಮಾಡಿ ಹೇಳಿದ್ದೇವೆ. ಆದರೆ ಆಯೋಜಕರಿಂದ ನಮಗೆ ಉತ್ತರ ಬರಲಿಲ್ಲ. ಹೀಗಾಗಿ ಅನುಮತಿ ಕೊಟ್ಟಿಲ್ಲ ಎನ್ನುತ್ತಾರೆ. 


ವಾಸವಿ ಕಾಂಡಿಮೆಂಟ್ಸ್ ನ ಮಾಲಕಿ ಕೆಎಸ್ ಸ್ವಾತಿ, ರೈತರು ಮತ್ತು ಜನರಿಗಾಗಿ ಈ ಮೇಳ ಏರ್ಪಡಿಸುತ್ತೇವೆ. ಬಿಬಿಎಂಪಿಯವರು ಚೌಟ್ರಿಯಲ್ಲಿ ಮಾಡಿ ಎಂದರು. ಅಲ್ಲಿ ಬಾಡಿಗೆ ದುಬಾರಿಯಿದೆ. 500ಕ್ಕೂ ಹೆಚ್ಚು ರೈತರು ಭಾಗವಹಿಸುವ ಮೇಳದಲ್ಲಿ ಚೌಟ್ರಿಯಲ್ಲಿ ಮಾಡಲು ಸಾಧ್ಯವಿಲ್ಲ ಎಂದರು.


2000ನೇ ಇಸವಿಯಲ್ಲಿ ವಾಸವಿ ಕಾಂಡಿಮೆಂಟ್ಸ್ ನ ಮಾಲಕಿ ಗೀತಾ ಶಿವಕುಮಾರ್ ರೈತರಿಗೆ ಸಹಾಯವಾಗಲೆಂದು ಅವರೆ ಕಾಯಿ ಮೇಳ ಆರಂಭಿಸಿದ್ದರು. ಇಲ್ಲಿ ಸಿಗುವ ಅವರೆ ಕಾಯಿ ದೋಸೆ, ಜಿಲೇಬಿ, ಲಡ್ಡು, ಅಕ್ಕಿ, ಪುಲಾವ್ ಮತ್ತು ಕಾಂಡಿಮೆಂಟ್ಸ್ ಗಳು ಜನಪ್ರಿಯ.

SCROLL FOR NEXT