ರಾಜ್ಯ

ಸಾರ್ವಜನಿಕವಾಗಿ ಮೂತ್ರ ಮಾಡುವುದನ್ನು ತಡೆಯಲು ಗೋಡೆಗೆ ದೊಡ್ಡ ದೊಡ್ಡ ಕನ್ನಡಿ ಅಳವಡಿಸಿದ ಬಿಬಿಎಂಪಿ

Lingaraj Badiger

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಸಾರ್ವಜನಿಕ ಪ್ರದೇಶಗಳಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ತಡೆಯುವುದಕ್ಕಾಗಿ ಗೋಡೆಗಳಿಗೆ ದೊಡ್ಡ ದೊಡ್ಡ ಕನ್ನಡಿಗಳನ್ನು ಅಳವಡಿಸಿದೆ.

ನಗರದಲ್ಲಿ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡಿ ಗಲೀಜು ಮಾಡುವುದನ್ನು ತಡೆಯುವುದಕ್ಕಾಗಿ ಬಿಬಿಎಂಪಿ ದಂಡ ವಿಧಿಸಿ, ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಬಿಬಿಎಂಪಿ ಈಗ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. 

ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವುದನ್ನು ತಡೆಯಲು ಬಿಬಿಎಂಪಿ ಸಿಬ್ಬಂದಿ 8x4 ಅಡಿ ಗಾತ್ರದ ಸುಮಾರು 50 ಸಾವಿರ ರೂ. ಮೌಲ್ಯದ ದೊಡ್ಡ ದೊಡ್ಡ ಕನ್ನಡಿಗಳನ್ನು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸರ್ಕಲ್, ಜ್ಯೋತಿ ನಿವಾಸ್ ಕಾಲೇಜ್, ಇಂದಿರಾ ನಗರ, ಇಎಸ್ ಐ ಸಮೀಪ ಹಾಗೂ ಕೆಆರ್ ಮಾರ್ಕೆಟ್ ಸೇರಿದಂತೆ ನಗರದ ಹಲವೆಡೆ ಕನ್ನಡಿ ಅಳವಡಿಸಿದ್ದಾರೆ.

ಸ್ವಚ್ಛ ಸರ್ವೇಕ್ಷಣ ಅಭಿಯಾನ 2020 ರ ಭಾಗವಾಗಿ ಈ ಹೊಸ ಯೋಜನೆ ಜಾರಿಗೊಳಿಸಲಾಗಿದೆ. ನಾವು ಸಮೀಕ್ಷೆ ನಡೆಸಿ, ಗೋಡೆಗಳ ಮೇಲೆ ಅತಿ ಹೆಚ್ಚು ಮೂತ್ರ ವಿಸರ್ಜನೆ ಮಾಡುವ ಐದು ಕಡೆಗಳಲ್ಲಿ ಈಗಾಗಲೇ ದೊಡ್ಡ ದೊಡ್ಡ ಕನ್ನಡಿಗಳನ್ನು ಅಳವಡಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಜನ ಕನ್ನಡಿ ನೋಡಿದ ತಕ್ಷಣ ಅಲ್ಲಿ ಮೂತ್ರ ವಿಸರ್ಜನೆ ಮಾಡದೇ ವಾಪಸ್ ಆಗುತ್ತಾರೆ. ನಗರವನ್ನು ಸ್ವಚ್ಛವಾಗಿಡುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ಡಿ ಅವರು ತಿಳಿಸಿದ್ದಾರೆ.

ಸ್ವಚ್ಛ ಸರ್ವೇಕ್ಷಣ-2020 ಕ್ಯಾಂಪೇನ್​ ಭಾಗವಾಗಿ ಇದನ್ನು ಕೈಗೆತ್ತಿಕೊಳ್ಳಲಾಗಿದ್ದು ಸಾರ್ವಜನಿಕರು ಹೆಚ್ಚಾಗಿ ಮೂತ್ರ ವಿಸರ್ಜನೆ ಮಾಡೋ ಪ್ರದೇಶಗಳಲ್ಲೇ ಕನ್ನಡಿ ಅಳವಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT