ರಾಜ್ಯ

ಸಿಎಎ, ಎನ್‌ಆರ್‌ಸಿ ವಿರೋಧಿ ಬರಹ: ಪ್ರಕರಣ ದಾಖಲು, ಆರೋಪಿಗಳಿಗಾಗಿ ಶೋಧ

Lingaraj Badiger

ಬೆಂಗಳೂರು: ದೇಶದ ವಾಣಿಜ್ಯ ರಾಜಧಾನಿ ಮುಂಬೈ, ರಾಷ್ಟ್ರೀಯ ರಾಜಧಾನಿ ದೆಹಲಿಯ ನಂತರ, ಪ್ರತಿಭಟನಕಾರರು ನಗರದ ಚರ್ಚ್ ಸ್ಟ್ರೀಟ್‌ನಲ್ಲಿ ಮುಚ್ಚಿದ ಅಂಗಡಿಗಳ ಬಾಗಿಲುಗಳ ಮೇಲೆ  'ಫ್ರೀ ಕಾಶ್ಮೀರ', 'ಸಿಎಎ, ಎನ್‌ಆರ್‌ಸಿ ಬೇಡ' ಫ್ಯಾಸಿಸ್ಟ್ ನರೇಂದ್ರ ಮೋದಿ ಸಾಯಬೇಕು ' ಮುಂತಾದ ಆಕ್ಷೇಪಾರ್ಹ ಘೋಷಣೆಗಳನ್ನು ಬರೆದಿದ್ದು, ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರು ಕೇಸರಿ ಬಣ್ಣದಿಂದ ಇವುಗಳನ್ನು ಅಳಿಸಿ ಹಾಕಿದ್ದಾರೆ.

ಆರ್‌ಎಸ್‌ಎಸ್ ಭಯೋತ್ಪಾದಕ, ಅಮಿತ್ ಶಾ ರಾಜೀನಾಮೆ ನೀಡಬೇಕು ಎಂಬ ಘೋಷಣೆಗಳನ್ನು ಕೂಡ ಬರೆಯಲಾಗಿತ್ತು.

ಕಬ್ಬನ್ ಪಾರ್ಕ್ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ ಎಂದು ಡಿಸಿಪಿ ಚೇತನ್ ಸಿಂಗ್ ರಾಥೋಡ್ ಅವರು ತಿಳಿಸಿದ್ದಾರೆ.

ಅಪರಿಚಿತ ವ್ಯಕ್ತಿಗಳು ಇವುಗಳನ್ನು ಬರೆದಿದ್ದಾರೆ. ಆದರೆ ಓರ್ವ ವ್ಯಕ್ತಿ ಇವುಗಳನ್ನು ಬರೆದಿರುವ ಸಾಧ್ಯತೆ ಕಡಿಮೆ ಇದೆ. ಪ್ರತಿಯೊಂದು ಅಂಗಡಿಯಲ್ಲಿಯೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅವುಗಳ ದೃಶ್ಯಗಳನ್ನು ಪರಿಶೀಲಿಸಿದ ಬಳಿಕ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಹೇಳಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಕಬ್ಬನ್ ಪಾರ್ಕ್ ಪೊಲೀಸರು ಕಪ್ಪು ಬಣ್ಣದಿಂದ ಬರಹಗಳನ್ನು ಅಳಿಸಿ ಹಾಕುವ ಕೆಲಸ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಕೂಡ ಕೇಸರಿ ಬಣ್ಣದಿಂದ ಬರಹಗಳನ್ನು ಅಳಿಸಿ ಹಾಕಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬರು "ಈ ಬರಹದಲ್ಲಿ ಯಾವುದೇ ತಪ್ಪಿಲ್ಲ" ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಎಲ್ಲರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

SCROLL FOR NEXT